ಪುತ್ತೂರು:
ಅಕ್ರಮ ಮಾದಕ ವಸ್ತು ಸಾಗಾಟದ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 106 ಕಿಲೋಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 19-01-2026ರ ಸಂಜೆ, ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಸಿಬ್ಬಂದಿಗಳೊಂದಿಗೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಸಜಂಕಾಡಿ ಪ್ರದೇಶದಲ್ಲಿ ವಾಹನ ತಪಾಸಣೆ ನಡೆಸಿದರು.


ತಪಾಸಣೆಯ ವೇಳೆ ಕಾರನ್ನು ನಿಲ್ಲಿಸಲಾಗಿದ್ದು, ಚಾಲಕನನ್ನು ವಿಚಾರಿಸಿದಾಗ ಆತನು ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ನಿವಾಸಿ ರಫೀಕ್ ಪಿ (37) ಎಂಬುದಾಗಿ ತಿಳಿದುಬಂದಿದೆ. ಆತನ ವರ್ತನೆ ಸಂಶಯಾಸ್ಪದವಾಗಿದ್ದರಿಂದ ಕಾರನ್ನು ಪರಿಶೀಲಿಸಿದಾಗ, ಪ್ಲಾಸ್ಟಿಕ್ ಕವರ್ನಲ್ಲಿ ಸುಮಾರು 100 ಗ್ರಾಂ ತೂಕದ ಗಾಂಜಾ ಎಲೆ, ಹೂ ಹಾಗೂ ಕಾಯಿ ಹೊಂದಿದ ಕಟ್ಟು ಪತ್ತೆಯಾಗಿದೆ.
ಅದೇ ವೇಳೆ, ಗೂಡ್ಸ್ ವಾಹನದ ಚಾಲಕನನ್ನು ವಿಚಾರಿಸಿದಾಗ ಆತನು ಬೆಳ್ತಂಗಡಿ ತಾಲೂಕು ಚಾರ್ಮಾಡಿ ಗ್ರಾಮದ ನಿವಾಸಿ ಅಬ್ದುಲ್ ಸಾದಿಕ್ (37) ಎಂಬುದಾಗಿ ತಿಳಿಸಿದ್ದಾನೆ. ಗೂಡ್ಸ್ ವಾಹನವನ್ನು ಪರಿಶೀಲಿಸಿದಾಗ, ಅದರಲ್ಲಿ 106 ಕಿಲೋಗ್ರಾಂ 60 ಗ್ರಾಂ ತೂಕದ ಒಟ್ಟು 73 ಕಟ್ಟು ಗಾಂಜಾ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂ. 53,03,000/- ಆಗಿದೆ.
ಆರೋಪಿಗಳ ವಿಚಾರಣೆಯಲ್ಲಿ, ಈ ಗಾಂಜಾವನ್ನು ಕೇರಳ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಾಗಿಸುತ್ತಿದ್ದುದಾಗಿ ತಿಳಿದುಬಂದಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಗಾಂಜಾ, ಸಾಗಾಣಿಕೆಗೆ ಬಳಸಿದ ಕಾರು ಹಾಗೂ ಗೂಡ್ಸ್ ವಾಹನ, ಮತ್ತು ಆರೋಪಿಗಳ ಬಳಿಯಿದ್ದ ಎರಡು ಮೊಬೈಲ್ ಫೋನ್ಗಳನ್ನು ಪೊಲೀಸರು ವಶಪಡಿಸಿಕೊಂಡು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.





ಈ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 09/2026, ಕಲಂ 8(c), 20(b)(ii)(C) NDPS Act-1985ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಗುಣಪಾಲ ಜೆ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹರೀಶ್, ಹರ್ಷಿತ್, ಪ್ರಶಾಂತ್, ಅದ್ರಾಮ, ಪ್ರಶಾಂತ್ ರೈ, ಪ್ರವೀಣ್ ರೈ, ಭವಿತ್ ರೈ, ನಾಗರಾಜ್, ಸತೀಶ್, ರಮೇಶ್, ಸುಬ್ರಮಣಿ ಹಾಗೂ ವಿನೋದ್ ಅವರುಗಳು ಪಾಲ್ಗೊಂಡಿದ್ದರು.




