ಪುತ್ತೂರು: ಸ್ಥಳೀಯ ಗ್ರಾಹಕರನ್ನು ಪುತ್ತೂರಿನಲ್ಲೇ ಉಳಿಸಿಕೊಳ್ಳುವ ಉದ್ದೇಶದಿಂದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘವು ಇತಿಹಾಸದಲ್ಲಿ ಮೊದಲ ಬಾರಿಗೆ ಆಯೋಜಿಸಿರುವ ‘ಪುತ್ತೂರು ಶಾಪಿಂಗ್ ಹಬ್ಬ’ದ ಮೆಗಾ ಡ್ರಾ ಕಾರ್ಯಕ್ರಮವು ಮಾ.29ರಂದು ಸಂಜೆ 5.30ಕ್ಕೆ ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿದೆ.





ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ರವಿಕೃಷ್ಣ ಕಲ್ಲಾಜೆ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಶಾಪಿಂಗ್ ಹಬ್ಬದ ಅಂಗವಾಗಿ ವ್ಯಾಪಾರ ಮಳಿಗೆಗಳಲ್ಲಿ ಖರೀದಿ ಮಾಡಿದ ಗ್ರಾಹಕರಿಗೆ ಗಿಫ್ಟ್ ಕೂಪನ್ ನೀಡಲಾಗಿದ್ದು, ಕಳೆದ 8 ವಾರಗಳಿಂದ ಪ್ರತಿವಾರ ಕೂಪನ್ ಡ್ರಾ ಮೂಲಕ 5ಜಿ ಮೊಬೈಲ್ ಫೋನ್ ಸೇರಿದಂತೆ 80ಕ್ಕೂ ಹೆಚ್ಚು ಬಹುಮಾನಗಳನ್ನು ವಿತರಿಸಲಾಗಿದೆ ಎಂದರು. ಇದೀಗ ಕುಟುಂಬ ಸಮ್ಮಿಲನ ಕಾರ್ಯಕ್ರಮದ ಜೊತೆಗೆ ಮೆಗಾ ಡ್ರಾ ಆಯೋಜಿಸಲಾಗಿದೆ ಎಂದು ತಿಳಿಸಿದರು.



ಮೆಗಾ ಬಂಪರ್ ಬಹುಮಾನವಾಗಿ ಮಾರುತಿ ಆಲ್ಟೋ ಕಾರು, ಜೊತೆಗೆ ಬೈಕ್, ಫ್ರಿಡ್ಜ್, ಆಂಡ್ರಾಯ್ಡ್ ಟಿವಿ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ಅದೃಷ್ಟವಂತ ಗ್ರಾಹಕರು ಪಡೆಯಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ಕೆನರಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಅಧ್ಯಕ್ಷ ಪಿ.ಬಿ. ಅಹಮ್ಮದ್ ಮುದಸ್ಸರ್, ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನ ಮಾಲಕ ಬಲರಾಮ ಆಚಾರ್ಯ, ಸೋಜಾ ಅಲ್ಯೂಮಿನಿಯಂ ಸಂಸ್ಥೆಯ ಗಿಲ್ಬರ್ಟ್ ಡಿಸೋಜ ಭಾಗವಹಿಸಲಿದ್ದಾರೆ.
ಪುತ್ತೂರಿನ ಸುತ್ತಮುತ್ತ ಸುಮಾರು 120 ಮಳಿಗೆಗಳಲ್ಲಿ ಗ್ರಾಹಕರಿಗೆ ಉಚಿತ ಕೂಪನ್ ವಿತರಿಸಲಾಗಿದ್ದು, ಸುಮಾರು 70 ಸಾವಿರಕ್ಕೂ ಅಧಿಕ ಗ್ರಾಹಕರಿಗೆ ತಲುಪಿದೆ. ಕಾರ್ಯಕ್ರಮಕ್ಕೆ ಸ್ಪಂದಿಸಿದ ವರ್ತಕರು ಮತ್ತು ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿ, ಮುಂದೆಯೂ ಇಂತಹ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದಾಗಿ ಸಂಘ ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಪೈ, ಉಪಾಧ್ಯಕ್ಷ ಮನೋಜ್ ಟಿ.ವಿ, ಎಂ.ಜಿ ಅಬ್ದುಲ್ ರಫೀಕ್, ಕೋಶಾಧಿಕಾರಿ ಜಾನ್ ಕುಟೀನಾ ಹಾಗೂ ಸಂಚಾಲಕ ಶಶಿರಾಜ್ ರೈ ಉಪಸ್ಥಿತರಿದ್ದರು.

