ಪುತ್ತೂರು ಶಾಸಕ ಅಶೋಕ್ ರೈ ನಿವೇಶನ ಹಂಚಿಕೆ ಕಾರ್ಯಕ್ಕೆ ಸರಕಾರದ ಪೂರ್ಣ ಬೆಂಬಲ
ಪುತ್ತೂರು: ಮನೆ ನಿವೇಶನ ಇಲ್ಲದ ಅರ್ಹ ಬಡ ಫಲಾನುಭವಿಗಳು ಇನ್ನುಮುಂದೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮದಲ್ಲೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರಕಾರದ ರಾಜೀವ ಗಾಂಧಿ ವಸತಿ ನಿಗಮ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಪುತ್ತೂರು ಶಾಸಕ ಅಶೋಕ್ ರೈ ಅವರ ಬಡವರಿಗೆ ನಿವೇಶನ ಹಂಚಿಕೆ ಕನಸಿಗೆ ಸರಕಾರದ ಸಂಪೂರ್ಣ ಬೆಂಬಲ ದೊರೆತಂತಾಗಿದೆ.




ಶಾಸಕರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಶೋಕ್ ರೈ ಅವರು ನಿವೇಶನ ರಹಿತ ಅರ್ಹ ಬಡ ಫಲಾನುಭವಿಗಳಿಗೆ ಸೈಟ್ ಹಂಚಿಕೆಗೆ ಮಹತ್ವ ನೀಡಿದ್ದು, ಈಗಾಗಲೇ ಪುತ್ತೂರು ತಾಲೂಕಿನ 18 ಗ್ರಾಮಗಳಲ್ಲಿ 380ಕ್ಕೂ ಹೆಚ್ಚು ಎಕರೆ ಜಾಗವನ್ನು ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾಯ್ದಿರಿಸಲಾಗಿದೆ. ಆದರೆ ಪುತ್ತೂರು ನಗರಸಭೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಸರಕಾರಿ ಜಾಗದ ಕೊರತೆಯಿಂದಾಗಿ ಅಲ್ಲಿನ ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸುವಲ್ಲಿ ಅಡೆತಡೆ ಎದುರಾಗಿತ್ತು. ಆಯಾ ಗ್ರಾಮದವರು ಆಯಾ ಗ್ರಾಮದಲ್ಲೇ ಅರ್ಜಿ ಸಲ್ಲಿಸಬೇಕು ಎಂಬ ನಿಯಮದಿಂದ ಸಮಸ್ಯೆ ಉಂಟಾಗಿತ್ತು.
ಈ ಹಿನ್ನೆಲೆ ಮಂಗಳವಾರ ಬೆಂಗಳೂರಿನಲ್ಲಿ ರಾಜೀವ ಗಾಂಧಿ ವಸತಿ ನಿಗಮದ ಅಧಿಕಾರಿಗಳನ್ನು ಭೇಟಿಯಾದ ಶಾಸಕ ಅಶೋಕ್ ರೈ, ನಿವೇಶನ ರಹಿತರಿಗೆ ಯಾವುದೇ ಗ್ರಾಮದಲ್ಲೂ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಶಾಸಕರ ಕೋರಿಕೆಯನ್ನು ಪರಿಗಣಿಸಿದ ಇಲಾಖೆ ಬುಧವಾರ ಸುತ್ತೋಲೆ ಹೊರಡಿಸಿದ್ದು, ಜಿಪಂ ಕಾರ್ಯನಿರ್ವಹಣಾಧಿಕಾರಿ ಹಾಗೂ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗೆ ಈ ಆದೇಶವನ್ನು ರವಾನಿಸಿದೆ.



ಸುತ್ತೋಲೆಯ ಮುಖ್ಯಾಂಶಗಳು:
ಮೂಲ ಗ್ರಾಮ ಪಂಚಾಯತ್/ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಯಲ್ಲಿ ನಿವೇಶನಕ್ಕೆ ಜಾಗ ಲಭ್ಯವಿಲ್ಲ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು.
ಫಲಾನುಭವಿಗಳು ಬೇರೆ ಗ್ರಾಮದಲ್ಲಿ ನಿವೇಶನ ಪಡೆದು ಅಲ್ಲಿ ವಾಸಿಸಲು ಒಪ್ಪಿಗೆ ನೀಡಿರುವ ಲಿಖಿತ ದಾಖಲೆಗಳನ್ನು ಪಡೆದು ಗ್ರಾಮಸಭೆ ಅಥವಾ ನಗರ ಆಶ್ರಯ ಸಮಿತಿಯಲ್ಲಿ ಚರ್ಚಿಸಿ ಠರಾವು ಕೈಗೊಳ್ಳಬೇಕು.
ಜಮೀನು ಲಭ್ಯವಿರುವ ಗ್ರಾಮ ಪಂಚಾಯತ್/ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೊದಲು ಅಲ್ಲಿನ ಅರ್ಹ ನಿವೇಶನರಹಿತರಿಗೆ ಹಂಚಿಕೆ ಮಾಡಬೇಕು. ಹೆಚ್ಚುವರಿಯಾಗಿ ಉಳಿದ ನಿವೇಶನಗಳಲ್ಲೇ ಬೇರೆ ಗ್ರಾಮದ ಫಲಾನುಭವಿಗಳನ್ನು ಪರಿಗಣಿಸಬೇಕು.
ಶಾಸಕ ಅಶೋಕ್ ರೈ ಅವರ ಪ್ರತಿಕ್ರಿಯೆ:
“ಮನೆ ನಿವೇಶನವಿಲ್ಲದೆ ಸಾವಿರಾರು ಬಡ ಕುಟುಂಬಗಳು ಬಾಡಿಗೆ ಮನೆಯಲ್ಲಿ ವಾಸಿಸುತ್ತಿವೆ. ಅವರಿಗೆ ಒಂದು ನಿವೇಶನ ಹಾಗೂ ಸೂರು ಕಲ್ಪಿಸುವುದು ನನ್ನ ಗುರಿ. ಚುನಾವಣೆಗೆ ಮೊದಲು ನೀಡಿದ ಭರವಸೆಯಂತೆ ನಿವೇಶನ ರಹಿತರಿಗೆ ಸೈಟ್ ಒದಗಿಸುವ ಕೆಲಸಕ್ಕೆ ಈಗ ಸರಕಾರದ ಬೆಂಬಲ ಸಿಕ್ಕಿದೆ. ಈ ಆದೇಶದಿಂದ ನಿವೇಶನ ಹಂಚಿಕೆ ಸುಲಭವಾಗಲಿದೆ. ಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆಯಬೇಕು,” ಎಂದು ಶಾಸಕರು ಹೇಳಿದರು.
ಈ ಸುತ್ತೋಲೆಯಿಂದ ಪುತ್ತೂರು ತಾಲೂಕಿನ ನಿವೇಶನ ರಹಿತ ಬಡ ಕುಟುಂಬಗಳಿಗೆ ದೊಡ್ಡ ನಿರಾಳತೆ ದೊರೆತಿದ್ದು, ಮುಂದಿನ ದಿನಗಳಲ್ಲಿ ನಿವೇಶನ ಹಂಚಿಕೆ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ.


