ನವದೆಹಲಿ: ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿರುವ ಕೆಂಪೆಗೌಡ ಪ್ರತಿಮೆ, ಗುಜರಾತಿನಲ್ಲಿರುವ ವಿಶ್ವದ ಅತಿ ಎತ್ತರದ ಪ್ರತಿಮೆ ಎನಿಸಿಕೊಂಡಿರುವ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಏಕತಾ ಪ್ರತಿಮೆ’ಯ ವಿನ್ಯಾಸಗೊಳಿಸಿದ ಶಿಲ್ಪಿ ರಾಮ್ ಸುತಾರ್ ಅವರು ಬುದ್ಧವಾರ ನಿಧನರಾದರು.

ಅವರು 100 ವರ್ಷ ವಯಸ್ಸಾಗಿದ್ದು, ಅವರ ಪುತ್ರ ಅನಿಲ್ ಸುತಾರ್ ತಿಳಿಸಿದರು.

1925ರ ಫೆಬ್ರವರಿ 19ರಂದು ಮಹಾರಾಷ್ಟ್ರದ ಧುಲೆ ಜಿಲ್ಲೆಯ ಗೊಂಡಾರ್ ಗ್ರಾಮದಲ್ಲಿ ಜನಿಸಿದ ಸುತಾರ್ ಅವರು ಬಾಲ್ಯದಲ್ಲೇ ಶಿಲ್ಪಕಲೆಯತ್ತ ಆಕರ್ಷಿತರಾಗಿದ್ದರು. ದೆಹಲಿಯ ಸಂಸತ್ ಭವನದ ಆವರಣದಲ್ಲಿರುವ ಧ್ಯಾನಸ್ಥ ಭಂಗಿಯ ಕುಳಿತಿರುವ ಮಹಾತ್ಮ ಗಾಂಧಿ ಪ್ರತಿಮೆ, ಕುರುಕ್ಷೇತ್ರದ ಧರ್ಮಪಥ ಶಿಲ್ಪಗಳು ಸೇರಿದಂತೆ ಹಲವು ಪ್ರಮುಖ ಪ್ರತಿಮೆಗಳ ಹಿಂದೆ ಸುತಾರ್ ಅವರ ಕೈಚಳಕವಿದೆ. ಈ ಪ್ರತಿಮೆಗಳು ಕೂಡ ಅವರ ಅತ್ಯುತ್ತಮ ಸೃಷ್ಟಿಗಳ ಸಾಲಿನಲ್ಲಿ ಸ್ಥಾನ ಪಡೆದಿವೆ.

ಸುತಾರ್ ಅವರಿಗೆ ಕೇಂದ್ರ ಸರ್ಕಾರ 1999ರಲ್ಲಿ ಪದ್ಮಶ್ರೀ ಮತ್ತು 2016ರಲ್ಲಿ ಪದ್ಮಭೂಷಣ ಪ್ರಶಸ್ತಿಗಳನ್ನು ನೀಡಿ ಗೌರವಿಸಿತ್ತು. ಇತ್ತೀಚೆಗೆ ಮಹಾರಾಷ್ಟ್ರದ ಅತ್ಯುನ್ನತ ಪ್ರಶಸ್ತಿಯಾದ ‘ಮಹಾರಾಷ್ಟ್ರ ಭೂಷಣ’ ಪ್ರಶಸ್ತಿಗೆ ಸಹ ಆಯ್ಕೆ ಮಾಡಲಾಗಿತ್ತು.

ದೇಶದ ಮೊದಲು ಉಪ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರನ್ನು ಗೌರವಿಸುವ ಸಲುವಾಗಿ ಗುಜರಾತಿನಲ್ಲಿ 182 ಮೀಟರ್ ಎತ್ತರದ ‘ಏಕತಾ ಪ್ರತಿಮೆ’ಯನ್ನು ನಿರ್ಮಿಸುವ ಮೂಲಕ ರಾಮ್ ಸುತಾರ್ ಅವರು ಶಿಲ್ಪಕಲೆಯ ಇತಿಹಾಸದಲ್ಲೇ ಅಮರರಾಗಿದ್ದಾರೆ.

Leave a Reply

Your email address will not be published. Required fields are marked *