ಪುತ್ತೂರು: ಕಂಬಳ ಕರೆಯಲ್ಲಿ ಅತಿವೇಗದ ಓಟಗಾರನೆಂಬ ದಾಖಲೆ ತಿಂಗಳ ಅಂತರದಲ್ಲೇ ಮುರಿದು, ಪುತ್ತೂರು ಕಂಬಳದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ. ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ದೇವರಮಾರು ಗದ್ದೆಯಲ್ಲಿ ಜ.25 ಮತ್ತು 26ರಂದು ನಡೆದ ಕೋಟಿ–ಚೆನ್ನಯ ಜೋಡುಕರೆ ಕಂಬಳದಲ್ಲಿ ಹೊಸ ವೇಗದ ದಾಖಲೆ ಸ್ಥಾಪನೆಯಾಗಿದೆ.





ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ–ಕಾಲೆ ಕೋಣಗಳ ಜೋಡಿ, ನೇಗಿಲು ಕಿರಿಯ ವಿಭಾಗದಲ್ಲಿ ಹೊಸ ದಾಖಲೆ ಸೃಷ್ಟಿಸಿವೆ. ಈ ಕೋಣಗಳನ್ನು ಪಡು ಸಾಂತೂರು ನಿವಾಸಿ, 22 ವರ್ಷದ ಯುವಕ ಪೃಥ್ವಿರಾಜ್ ಪೂಜಾರಿ ಓಡಿಸಿದ್ದು, ಅವರು “ಕಂಬಳ ಕರೆಯ ಅತಿವೇಗದ ಓಟಗಾರ” ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.
ಈ ಕೋಣಗಳ ಜೋಡಿ 125 ಮೀಟರ್ ಉದ್ದದ ಕರೆಯನ್ನು 10.65 ಸೆಕೆಂಡ್ಗಳಲ್ಲಿ ಕ್ರಮಿಸಿ ಗುರಿ ಮುಟ್ಟಿದೆ. ಇದು 100 ಮೀಟರ್ ದೂರವನ್ನು 8.52 ಸೆಕೆಂಡ್ಗಳಲ್ಲಿ ಕ್ರಮಿಸಿದಂತೆ ದಾಖಲಾಗಿದೆ.
ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ರಾಮ–ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ನಲ್ಲಿ ಶ್ರೀಕಾ ಸಂದೀಪ್ ಶೆಟ್ಟಿ ಅವರ ಗಾಂಧಿ ಮೈದಾನ ಸಂತು–ಸುರತ್ಕಲ್ ಪಾಂಚ ಕೋಣಗಳು 125 ಮೀಟರ್ ದೂರವನ್ನು 10.87 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು. ಅಂದರೆ 100 ಮೀಟರ್ ದೂರವನ್ನು 8.69 ಸೆಕೆಂಡ್ಗಳಲ್ಲಿ ತಲುಪಿದಂತೆ ಆಗಿತ್ತು. ಆ ದಾಖಲೆ ಕುಂದ ಬಾರಂದಾಡಿ ಮಾಸ್ತಿಕಟ್ಟೆಯ ಸ್ವರೂಪ್ ಕುಮಾರ್ ಅವರು ಕೋಣಗಳನ್ನು ಓಡಿಸುವ ಮೂಲಕ ನಿರ್ಮಿಸಿದ್ದರು.
ಒಂದೇ ತಿಂಗಳೊಳಗೆ ಇದೀಗ ಪುತ್ತೂರು ಕಂಬಳದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದ್ದು, ಕಂಬಳ ಕ್ರೀಡಾ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ. ಕಂಬಳ ಕರೆಯ ಅತಿವೇಗದ ಓಟಗಾರ ಎಂಬ ದಾಖಲೆ ಮೊದಲು 2021ರಲ್ಲಿ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರು ನಿರ್ಮಿಸಿದ್ದರು. ಆಗ ಅವರನ್ನು “ಕಂಬಳ ಕರೆಯ ಉಸೈನ್ ಬೋಲ್ಟ್” ಎಂದು ಕರೆಲಾಗಿತ್ತು.
ಪ್ರಸ್ತುತ ಹೊಸ ದಾಖಲೆ ನಿರ್ಮಿಸಿರುವ ಪೃಥ್ವಿರಾಜ್ ಪೂಜಾರಿ ಅವರು ಉಡುಪಿ ಜಿಲ್ಲೆಯ ಪಡು ಸಾಂತೂರಿನವರಾಗಿದ್ದು, ಡಿಪ್ಲೋಮಾ ಸಿವಿಲ್ ಇಂಜಿನಿಯರಿಂಗ್ ಪದವೀಧರರಾಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಕಂಬಳದ ಕೋಣಗಳನ್ನು ಓಡಿಸುತ್ತಿದ್ದು, ತಮ್ಮ ವೇಗ ಮತ್ತು ಕೌಶಲ್ಯದಿಂದ ಕಂಬಳ ಕ್ರೀಡೆಯಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ್ದಾರೆ.




