ಪುತ್ತೂರು: ಭಕ್ತ ಕೋಡಿಯಲ್ಲಿದ್ದ ಭಗವದ್ವಜದ ಕಟ್ಟೆಯನ್ನು ಅಧಿಕಾರಿಗಳು ನೆಲಸಮಗೊಳಿಸಿರುವ ಘಟನೆ ಖಂಡನೀಯವಾಗಿದೆ ಎಂದು ಬಿಜೆಪಿ ನಾಯಕ ಅರುಣ್ ಕುಮಾರ್ ಪುತ್ತಿಲ ತಿಳಿಸಿದ್ದಾರೆ.
ಈ ಕ್ರಮ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಸ್ಥಳೀಯ ರಾಜಕಾರಣಿಗಳ ಕುಮ್ಮಕ್ಕಿನಿಂದ ರಾಜಕೀಯ ಪ್ರೇರಿತವಾಗಿ ನಡೆದಿದ್ದು, ಅಧಿಕಾರಿಗಳಿಗೆ ಶೋಭೆ ತರುವಂತದ್ದಲ್ಲ ಎಂದು ಅವರು ಆರೋಪಿಸಿದ್ದಾರೆ. ಪಂಚಾಯತ್ ಅಧ್ಯಕ್ಷರ ಅಭಿಪ್ರಾಯಕ್ಕೂ ಬೆಲೆ ನೀಡದೇ ಅಧಿಕಾರಿಗಳು ನಡೆದುಕೊಂಡಿರುವುದು ಅಸಮಂಜಸವಾಗಿದ್ದು, ಈ ಸಂಬಂಧ ಗ್ರಾಮ ಪಂಚಾಯತ್ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪುತ್ತಿಲ ಆಗ್ರಹಿಸಿದ್ದಾರೆ.




ಹಲವು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಭಗವದ್ವಜದ ಕಟ್ಟೆಯನ್ನು ತೆರವುಗೊಳಿಸಿರುವುದು ಹಿಂದೂಗಳ ಧಾರ್ಮಿಕ ನಂಬಿಕೆಗೆ ಧಕ್ಕೆ ತರುವಂತದ್ದು ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಯ ಘಟನೆಗಳು ಪದೇಪದೇ ನಡೆಯುತ್ತಿದ್ದು, ರಾಜಕೀಯ ಲಾಭಕ್ಕಾಗಿ ಹಿಂದೂ ಸಮಾಜವನ್ನು ಕೆಣಕುವ ಪ್ರಯತ್ನ ನಡೆಯುತ್ತಿದೆ ಎಂದು ಪುತ್ತಿಲ ಆರೋಪಿಸಿದ್ದಾರೆ.
ಇಂತಹ ರಾಜಕೀಯ ನಡೆಯ ವಿರುದ್ಧ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಸೂಕ್ತ ಉತ್ತರ ನೀಡಲು ಸಿದ್ಧವಾಗಿದೆ ಎಂದು ಅರುಣ್ ಕುಮಾರ್ ಪುತ್ತಿಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




