ಉಪ್ಪಿನಂಗಡಿ/ಪುತ್ತೂರು:
ಅಕ್ಷರ ಜ್ಞಾನವಿಲ್ಲದೆ ಕೂಲಿ ಕೆಲಸಕ್ಕಾಗಿ ಹೊರಜಿಲ್ಲೆಯಿಂದ ದಕ್ಷಿಣ ಕನ್ನಡಕ್ಕೆ ವಲಸೆ ಬಂದ ಹಾವೇರಿ ಜಿಲ್ಲೆಯ ಸಂಕ್ರಮವ್ವ ಲಮಾಣಿ ಇಂದು ರೋಡ್ ರೋಲರ್ ನಡೆಸುವ ನಿಪುಣ ತಂತ್ರಜ್ಞೆಯಾಗಿರುವುದು ಜನಮನ ಸೆಳೆಯುತ್ತಿದೆ. ತನ್ನ ಬುದ್ಧಿಶಕ್ತಿ, ಪರಿಶ್ರಮ ಮತ್ತು ಹಠದಿಂದ ಬದುಕನ್ನು ಕಟ್ಟಿಕೊಂಡ ಈಕೆ ಅನೇಕರಿಗೆ ಪ್ರೇರಣೆಯಾಗಿದ್ದಾಳೆ.

ಸುಮಾರು 18 ವರ್ಷದ ವಯಸ್ಸಿನಲ್ಲಿ ಹಾವೇರಿಯಿಂದ ಕೂಲಿ ಹುಡುಕುತ್ತ ಉಪ್ಪಿನಂಗಡಿಗೆ ಬಂದ ಸಂಕ್ರಮವ್ವ, ಉಪ್ಪಿನಂಗಡಿಯ ಕ್ಲಾಸ್-1 ಗುತ್ತಿಗೆದಾರ ರಾಧಾಕೃಷ್ಣ ನಾಯಕ್ ಅವರ ಉದಯಗಿರಿ ಕನ್‌ಸ್ಟ್ರಕ್ಷನ್ ನಲ್ಲಿ ಕೆಲಸಕ್ಕೆ ಸೇರ್ಪಡೆಯಾದರು. ಶುರುದಲ್ಲಿ ರಸ್ತೆಗೆ ಡಾಮರು ಹಾಕುವ ಮೊದಲು ರಸ್ತೆ ಸ್ವಚ್ಛಗೊಳಿಸುವುದು ಈಕೆಯ ಕೆಲಸ.


ಕಾಲಕ್ರಮದಲ್ಲಿ, ಸಂಕ್ರಮವ್ವಳ ಗಮನ ಆಟೋಮೆಟಿಕ್ ರೋಲರ್ ಮೇಲೆ ಬಿತ್ತು. ತಾನೂ ಅದನ್ನು ಓಡಿಸಬೇಕು ಎಂಬ ಕನಸನ್ನು ವರ್ಷಗಳವರೆಗೆ ಮನಸಿನಲ್ಲಿ ಇಟ್ಟುಕೊಂಡಿದ್ದಳು.
ಕನಸಿಗೆ ದಾರಿಯಾದ ಚಾರ್ಮಾಡಿ ಘಾಟಿ ಪ್ರಾಜೆಕ್ಟ್
2021ರಲ್ಲಿ ರಾಧಾಕೃಷ್ಣ ನಾಯಕ್ ಅವರಿಗೆ ಚಾರ್ಮಾಡಿ ಘಾಟಿಯಲ್ಲಿ ರಾಜ್ಯ ಹೆದ್ದಾರಿಯ 250 ಕಿಮೀ ಡಾಮರೀಕರಣ ಗುತ್ತಿಗೆ ಬಂದಾಗ ಸಂಕ್ರಮವ್ವಳಿಗೆ ತನ್ನ ಆಸೆಯನ್ನು ಹೇಳಲು ಧೈರ್ಯ ಒದಗಿತು.
ಮೊದಲಿಗೆ ಗುತ್ತಿಗೆದಾರರು ಆಕೆಯ ವಿನಂತಿಯನ್ನು ತಿರಸ್ಕರಿಸಿದರೂ, ಪದೇ ಪದೇ ಕೇಳುತ್ತಿದ್ದಂತೆ, “ನೋಡಿ ಬಾ” ಎಂದು ರೋಲರ್ ಕೊಟ್ಟು ಪ್ರಯತ್ನಿಸಲು ಅವಕಾಶ ನೀಡಿದರು. ಇದೇ ಕ್ಷಣ ಸಂಕ್ರಮವ್ವಳ ಜೀವನದಲ್ಲಿ ಬದಲಾವಣೆ ತಂದಿತು.





