ಬಂಟ್ವಾಳ: ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುನಃಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮವು ಮಾ.30ರಿಂದ ಏ.6ರವರೆಗೆ ನಡೆಯಲಿದೆ. ಇದರ ಅಂಗವಾಗಿ ನಡೆದ ರುದ್ರನಮನಂ ಕಾರ್ಯಕ್ರಮದಲ್ಲಿ ಸಾಮೂಹಿಕ ರುದ್ರಪಠಣ ನಡೆಯಿತು. ಸುಮಾರು 75ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ವೆಬ್‌ಸೈಟ್ ಅನಾವರಣ ಹಾಗೂ ಬ್ರಹ್ಮಕಲಶ ಗೀತೆಯ ಬಿಡುಗಡೆ ನಡೆಯಿತು. ಸಂಜೆ ಸಮಾಲೋಚನಾ ಸಭೆ ನಡೆಯಿತು.


ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ವೆಬ್‌ಸೈಟ್ ಅನಾವರಣ ಹಾಗೂ ಬ್ರಹ್ಮಕಲಶ ಗೀತೆಯನ್ನು ಬಿಡುಗಡೆಗೊಳಿಸಿ ದಿಕ್ಸೂಚಿ ಮಾರ್ಗದರ್ಶನ ನೀಡಿದ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್ ಮಾತನಾಡಿ, ಧರ್ಮಸ್ಥಳಕ್ಕೂ ಪದ್ಯಾಣಕ್ಕೂ ಯಕ್ಷಗಾನದ ಮೂಲಕ ನಂಟು ಬೆಸೆದಿದೆ. ಸಾಂಸ್ಕೃತಿಕ ಕ್ಷೇತ್ರಕ್ಕೆ ಪದ್ಯಾಣದ ಮಣ್ಣಿನ ಕೊಡುಗೆ ಅನನ್ಯವಾಗಿದ್ದು, ಈ ಪರಿಸರದಲ್ಲಿ ಹಲವು ವಿದ್ವಾಂಸರು ಇದ್ದಾರೆ ಎಂದರು. ಜೊತೆಗೆ ಶೌಚಾಲಯ, ಪಾರ್ಕಿಂಗ್ ಮತ್ತು ಭೋಜನ ವ್ಯವಸ್ಥೆಗೆ ವಿಶೇಷ ಗಮನ ಹರಿಸುವಂತೆ ಸಲಹೆ ನೀಡಿದರು.





ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರೂ ಆಗಿರುವ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮಾತನಾಡಿ, ತಾನು ಶಾಸಕನಾದ ಬಳಿಕ ಮುನ್ನೂರಕ್ಕೂ ಅಧಿಕ ದೇವಸ್ಥಾನಗಳ ಸುತ್ತಮುತ್ತಲಿನ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವ ಅವಕಾಶ ದೊರೆತಿದೆ. ಪದ್ಯಾಣ ಕ್ಷೇತ್ರದ ಅಭಿವೃದ್ಧಿಗೆ ತನ್ನ ಸಹಕಾರ ಸದಾ ಇರುತ್ತದೆ ಎಂದರು.


ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಡಾ. ಟಿ. ಶ್ಯಾಮ ಭಟ್ ವಹಿಸಿದ್ದರು. ಅವರು ಮಾತನಾಡಿ, ಪದ್ಯಾಣ ಬ್ರಹ್ಮಕಲಶೋತ್ಸವಕ್ಕೆ ಸ್ಥಳೀಯರೊಂದಿಗೆ ಪರವೂರ ಜನರ ಸಹಕಾರವೂ ದೊರಕುತ್ತಿದ್ದು, ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಲು ಎಲ್ಲರ ಮಾರ್ಗದರ್ಶನ ಅಗತ್ಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣಶ್ಯಾಮ, ಮುಖ್ಯ ಅತಿಥಿಗಳಾಗಿ ಬೆನಕಾ ಗೋಲ್ಡ್ ಬೆಂಗಳೂರು ಎಂ.ಡಿ. ಭರತ್ ಕುಮಾರ್ ಎಸ್., ಕಾಕುಂಜೆ ಸಾಫ್ಟ್‌ವೇರ್ ಎಂ.ಡಿ. ಕಾಕುಂಜೆ ಗೋಪಾಲಕೃಷ್ಣ ಭಟ್, ಪತ್ರಕರ್ತ ಜಿತೇಂದ್ರ ಕುಂದೇಶ್ವರ, ಆಡಳಿತ ಮೊಕ್ತೇಸರ ಸತ್ಯನಾರಾಯಣ ಭಟ್ ಸೇರಾಜೆ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸೇರಾಜೆ ಗೋಪಾಲಕೃಷ್ಣ ಭಟ್, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪದ್ಯಾಣ ರಘುರಾಮ ಕಾರಂತ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶ್ಯಾಮಸುದರ್ಶನ ಹೊಸಮೂಲೆ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಬ್ರಹ್ಮಕಲಶೋತ್ಸವ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ ಶೆಟ್ಟಿ ಅನೆಯಾಲಗುತ್ತು ಸೇರಿದಂತೆ ನಾನಾ ಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು.


