ಪುತ್ತೂರು: ವಿದ್ಯಾರ್ಥಿನಿಯರು ತಮಗಾಗುತ್ತಿರುವ ಅನ್ಯಾಯದವಿರುದ್ಧ ಪ್ರತಿಭಟಿಸಿದಕ್ಕಾಗಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಶಾಸಕ ಅಶೋಕ್ ಕುಮಾರ್ ರೈ ಅವರು ಸರಕಾರಕ್ಕೆ ಪತ್ರ ಬರೆದು ಉದ್ದೇಶ ಪೂರ್ವಕವಾಗಿಯೇ ಅಮಾನತು ಮಾಡಿಸಿದ್ದಾರೆ. ಓರ್ವ ಮಹಿಳೆಯ ವಿರುದ್ಧದ ಈ ಸೇಡಿನ ಕ್ರಮ ಖಂಡನೀಯ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದ್ದಾರೆ.
ಪತ್ರಿಕಾ ಹೇಳಿಕೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು ಪ್ರಬುದ್ದರು. ಅವರ ಹಕ್ಕುಗಳನ್ನು ಕೇಳಲು ಅವರು ಸ್ವತಂತ್ರರು. ಅದಕ್ಕೆ ಉಪಾನ್ಯಾಸಕರು, ಪ್ರಾಂಶುಪಾಲರ ಪ್ರೇರಣೆ ನೀಡಬೇಕಿಲ್ಲ. ಅವರಾಗಿಯೇ ತೀರ್ಮಾನ ತೆಗೆದುಕೊಳ್ಳುವಷ್ಟು ಬುದ್ದಿ ಶಕ್ತಿ ಉಳ್ಳವರು. ಆದರೆ ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿನಿಯರ ಪ್ರತಿಭಟನೆಗೆ ಪ್ರಾಂಶುಪಾಲರ ಪ್ರೇರಣೆ ಎಂದು ಪತ್ರ ಬರೆದು ಅವರನ್ನು ಅಮಾನತು ಮಾಡಿಸಿದ್ದಾರೆ. ಇದು ಅಮಾನತ ಪತ್ರದಲ್ಲಿ ಇದೆ ಎಂದು ಮಠಂದೂರು ಆರೋಪಿಸಿದ್ದಾರೆ.




ಶಾಸಕರು ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು. ನೀವು ಎಷ್ಟು ಬಾರಿ ಸಮಿತಿ ಸಭೆ ನಡೆಸಿ ಸಮಸ್ಯೆ ಆಲಿಸಿದ್ದೀರಿ ಎನ್ನುವುದು ಎಲ್ಲರಿಗೆ ಗೊತ್ತಿದೆ. ಸಭೆಯನ್ನು ನಡೆಸದೆ ಅಲ್ಲಿನ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಂಡಿಲ್ಲ. ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿರುವುದನ್ನು ನೀವು ಸಹಿಸದೆ, ನಿಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಪ್ರಾಂಶುಪಾಲರ ವಿರುದ್ದವೇ ಕ್ರಮ ಜರಗಿಸುವ ಮೂಲಕ ಸರ್ವಾಧಿಕಾರಿ ಧೋರಣೆ ತಳೆದಿದ್ದೀರಿ ಎಂದು ಮಠಂದೂರು ಆರೋಪಿಸಿದ್ದಾರೆ.
ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅವರು ದಲಿತ ಸಮುದಾಯಕ್ಕೆ ಸೇರಿದವರು. ಅನಾರೋಗ್ಯದ ಕಾರಣದಿಂದ ಪುತ್ತೂರು ಮಹಿಳಾ ಕಾಲೇಜಿಗೆ ವರ್ಗಾವಣೆ ಆಗಿ ಬಂದಿದ್ದರು. ಅಂತಹವರ ಮೇಲೆ ಶಾಸಕರು ಪತ್ರ ಬರೆದು ಅಮಾನತು ಮಾಡಿರುವುದು ದುರದೃಷ್ಟಕರ. ಬಿಜೆಪಿ ಪಕ್ಷವೂ ಈ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿದೆ. ವಿದ್ಯಾರ್ಥಿಗಳ ಪರ ನಿಲ್ಲಲಿದೆ ಎಂದು ಮಠಂದೂರು ಹೇಳಿದ್ದಾರೆ.




