ಕಡಬದ ವಿದ್ಯಾನಗರದಲ್ಲಿರುವ ಸರಸ್ವತಿ ವಿದ್ಯಾಲಯ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 23-01-2026ರ ಶುಕ್ರವಾರ ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರು ವರ್ಷಗಳ ಪೂರ್ಣತೆಯ ಸಂಧರ್ಭದಲ್ಲಿ ಪೋಷಕರ ಸಭೆಯೊಂದಿಗೆ ‘ಸಪ್ತ ಶಕ್ತಿ ಸಂಗಮ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಆರತಿ ಬೆಳಗಿ, ಅರಸಿನ–ಕುಂಕುಮ, ಬೆಲ್ಲ ಹಾಗೂ ನೀರನ್ನು ನೀಡಿ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ಪ್ರಾರ್ಥನೆ ನಡೆಯಿತು.

ವಸಂತಿ ಹಾಗೂ ಭವ್ಯ ಮಾತಾಜಿಯವರು ಮಾತೆಯರಿಗೆ ಹಿಂದಿ ಗೀತೆಯನ್ನು ಕಲಿಸಿಕೊಟ್ಟರು. ಸರಸ್ವತಿ ವಿದ್ಯಾಲಯದ ಮಾತಾಜಿ ಶ್ರೀಮತಿ ಪಂಪಲಾ ಅವರು ಪ್ರಾಸ್ತಾವಿಕ ಮಾತುಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು.
ಈ ಸಂದರ್ಭ ಶ್ರೀಮತಿ ಪ್ರೇಮಲತಾ ಮಾತಾಜಿ ಅವರು ‘ಸಪ್ತ ಶಕ್ತಿ ಸಂಗಮ – ಕುಟುಂಬದ ಅರಿವು ಹಾಗೂ ಪರಿಸರದ ಬಗ್ಗೆ ಭಾರತೀಯ ದೃಷ್ಟಿಕೋನ’ ಎಂಬ ವಿಷಯದ ಕುರಿತು ಬೌದ್ಧಿಕ ಉಪನ್ಯಾಸ ನೀಡಿದರು. ಬಳಿಕ ಶ್ರೀಮತಿ ವಿನುತಾ ಅವರು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸರಸ್ವತಿ ವಿದ್ಯಾಲಯದ ಸಂಚಾಲಕಿ ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಕುಮಾರಿ ರಶ್ಮಿ ಅವರು ಧನ್ಯವಾದ ಸಮರ್ಪಿಸಿದರು. ಶ್ರೀಮತಿ ವನಿತಾ ಅವರು ಕಾರ್ಯಕ್ರಮವನ್ನು ಸುಂದರವಾಗಿ ನಿರೂಪಿಸಿ, ಮಾತೆಯರಿಗೆ ಸಪ್ತ ಶಕ್ತಿ ಸಂಗಮ ಕಾರ್ಯಕ್ರಮದ ಸಂಕಲ್ಪವನ್ನು ಮಾಡಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಯಾಯಿತು.
ಒಟ್ಟು 157 ಮಾತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *