ಕಡಬ:
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷಾಚರಣೆಯ ಅಂಗವಾಗಿ ಸರಸ್ವತಿ ವಿದ್ಯಾಲಯ ಪ್ರೌಢಶಾಲೆಯಲ್ಲಿ “ಸಪ್ತಶಕ್ತಿ ಸಂಗಮ” ಕಾರ್ಯಕ್ರಮವು ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಸವಿತಾ ಶಿವಸುಬ್ರಹ್ಮಣ್ಯ ಭಟ್ ಅವರ ಅಧ್ಯಕ್ಷತೆಯಲ್ಲಿ ಯಾದವಶ್ರೀ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರು ಹಾಗೂ ರಾಷ್ಟ್ರೀಯ ಮಂತ್ರಿ ವಿದ್ಯಾಭಾರತಿ ಶಿಕ್ಷಾ ಸಂಸ್ಥಾನದ ಸದಸ್ಯರಾದ ಡಾ. ಶೋಭಿತ ಸತೀಶ್ ಆಗಮಿಸಿ, ಮಾತೆಯರಿಗೆ ಕುಟುಂಬದ ಅರಿವು, ಪರ್ಯಾವರಣದ ಮಹತ್ವ ಹಾಗೂ ಸಪ್ತಶಕ್ತಿ ಸಂಗಮದ ಆದರ್ಶಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ನಾಟಿ ವೈದ್ಯೆ ಶ್ರೀಮತಿ ಚೆನ್ನು ಕೆವಳ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿನಿಯರಾದ ರುತ್ವಿ, ಜ್ಞಾನವಿ ಮತ್ತು ಜಸ್ಮಿತ ಅವರು ವೀರಮಾತೆಯರ ವೇಷದಲ್ಲಿ ಅವರ ಸಂದೇಶವನ್ನು ಅರ್ಥಪೂರ್ಣವಾಗಿ ಕಾರ್ಯಕ್ರಮಕ್ಕೆ ಪರಿಚಯಿಸಿದರು.
ಮಾತೆಯರಿಗೆ ಪುರಾಣ ಗ್ರಂಥಗಳ ರಸಪ್ರಶ್ನೆ ಕಾರ್ಯಕ್ರಮವನ್ನು ಶಿಕ್ಷಕಿ ಶ್ರೀಮತಿ ಜಲಜಾಕ್ಷಿ ಬಿ.ವಿ ನಡೆಸಿಕೊಟ್ಟರು. ವೇದಿಕೆಯಲ್ಲಿ ಮಾತೃ ಭಾರತೀಯ ಅಧ್ಯಕ್ಷರಾದ ಶ್ರೀಮತಿ ಗೀತಾ ಪ್ರವೀಣ್ ಪರ್ಲ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕಿ ಶ್ರೀಮತಿ ಶೈಲಶ್ರೀ ರೈ ಎಸ್ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸಪ್ತಶಕ್ತಿ ಸಂಗಮದ ಸಂಕಲ್ಪವನ್ನು ಶಿಕ್ಷಕಿ ಶ್ರೀಮತಿ ಚಂದ್ರಾಕ್ಷಿ ಕೆ ಬೋಧಿಸಿದರು. ಸನ್ಮಾನ ಪತ್ರವನ್ನು ಶ್ರೀಮತಿ ಸೌಮ್ಯ ಕೆ.ಎ ವಾಚಿಸಿದರು. ಶಿಕ್ಷಕಿ ಜಲಜಾಕ್ಷಿ ಬಿ.ವಿ ವಂದಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಕಾವ್ಯಶ್ರೀ ಡಿ ಮನೋಜ್ಞವಾಗಿ ನಿರೂಪಿಸಿದರು.









