ಕಡಬ: ರಾಷ್ಟ್ರೀಯ ಸ್ವಯಂಸೇವಕ ಸಂಘವು ನೂರು ವರ್ಷಗಳನ್ನು ಪೂರೈಸಿದ ಸಂದರ್ಭದ ಅಂಗವಾಗಿ ಸರಸ್ವತಿ ವಿದ್ಯಾಲಯ ಸಮೂಹ ಸಂಸ್ಥೆಗಳು, ಕಡಬ ಇವರ ವತಿಯಿಂದ ದಿನಾಂಕ 20/12/2025 ರಂದು ಶನಿವಾರ ಸರಸ್ವತಿ ವಿದ್ಯಾಲಯ ವಿದ್ಯಾನಗರ, ಕಡಬದಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಅತ್ಯಂತ ಭಕ್ತಿಭಾವ ಮತ್ತು ಸಾಂಸ್ಕೃತಿಕ ವಾತಾವರಣದಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ ಮಾತೆಯರನ್ನು ಆರತಿ ಬೆಳಗಿ, ಅರಸಿನ–ಕುಂಕುಮ, ಬೆಲ್ಲ ಹಾಗೂ ನೀರನ್ನು ನೀಡಿ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು. ಅತಿಥಿಗಳು ದೀಪ ಪ್ರಜ್ವಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಸರಸ್ವತಿ ವಿದ್ಯಾಲಯದ ಮಕ್ಕಳಿಂದ ಸರಸ್ವತಿ ವಂದನೆಯೊಂದಿಗೆ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ನೆರೆದಿದ್ದ ಮಾತೆಯರಿಗೆ ವಸಂತಿ ಮಾತಾಜಿ ಹಾಗೂ ಭವ್ಯ ಮಾತಾಜಿಯವರು ಹಿಂದಿ ಗೀತೆಯನ್ನು ಕಲಿಸಿಕೊಟ್ಟರು. ಸರಸ್ವತಿ ವಿದ್ಯಾಲಯದ ಮಾತಾಜಿಯವರಾದ ಪಂಪಲ ಮಾತಾಜಿಯವರು ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರಸ್ವತಿ ವಿದ್ಯಾಲಯದ ಸಂಚಾಲಕರಾದ ಶ್ರೀಮತಿ ಸವಿತಾ ಶಿವಸುಬ್ರಮಣ್ಯ ಭಟ್ ಅವರು “ಕುಟುಂಬದ ಅರಿವು ಮತ್ತು ಪರಿಸರದ ಬಗ್ಗೆ ಭಾರತೀಯ ದೃಷ್ಟಿಕೋನ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಶ್ರೋತೃವರ್ಗದ ಮೆಚ್ಚುಗೆ ಗಳಿಸಿದರು. ನಂತರ ಶ್ರೀಮತಿ ವನಿತಾ ಮಾತಾಜಿಯವರು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ವಿದ್ಯಾರ್ಥಿಗಳು ವೀರ ಮಹಿಳೆಯರ ವೇಷಭೂಷಣಗಳನ್ನು ಧರಿಸಿ ಸ್ಪೂರ್ತಿದಾಯಕ ಸಂದೇಶಗಳನ್ನು ನೀಡಿದರು. ಮುಂದುವರಿದು ಶ್ರೀಮತಿ ಪ್ರೇಮಲತಾ ಮಾತಾಜಿಯವರು ಸಪ್ತಶಕ್ತಿ ಸಂಗಮದ ಮಹತ್ವ ಹಾಗೂ ಮಹಿಳೆಯ ಏಳು ಸದ್ಗುಣಗಳ ಬಗ್ಗೆ ಸವಿವರವಾಗಿ ವಿವರಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿದ್ದ ಅತಿಥಿಗಳಿಂದ ಪ್ರಗತಿಪರ ಕೃಷಿಕರಾದ ಶ್ರೀಮತಿ ರೇವತಿ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸರಸ್ವತಿ ವಿದ್ಯಾಲಯದ ಆಡಳಿತ ಮಂಡಳಿಯ ನಿರ್ದೇಶಕರಾದ ಪುಲಾಸ್ತ್ಯ ರೈ ಅವರು ಕಾರ್ಯಕ್ರಮಕ್ಕೆ ಶುಭಾಶಯಗಳನ್ನು ಕೋರಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಾತೃ ಶಕ್ತಿ ಸಹ ಪ್ರಮುಖ್ ಕಡಬ ಪ್ರಖಂಡದ ಶ್ರೀಮತಿ ವೀಣಾ ರಮೇಶ್ ಕೊಲ್ಲೆ ಸಾಗು ಅವರು ಅಧ್ಯಕ್ಷೀಯ ನುಡಿಗಳ ಮೂಲಕ ಮಹಿಳಾ ಶಕ್ತಿಯ ಮಹತ್ವವನ್ನು ಸಾರಿದರು.

ಕಾರ್ಯಕ್ರಮದ ಕೊನೆಯ ಹಂತದಲ್ಲಿ ಶ್ವೇತಾ ಮಾತಾಜಿಯವರು ಧನ್ಯವಾದ ಸಮರ್ಪಿಸಿದರು. ನಂತರ ಮೀನಾ ಮಾತಾಜಿಯವರು ಮಾತೆಯರಿಗೆ ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಸಂಕಲ್ಪವನ್ನು ಮಾಡಿಸಿದರು. ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.
ಕಾರ್ಯಕ್ರಮವನ್ನು ವಿನುತ ಮಾತಾಜಿಯವರು ನಿರೂಪಿಸಿ, ಪಂಪಲ ಮಾತಾಜಿಯವರು ಸ್ವಾಗತಿಸಿದರು. ಒಟ್ಟು 53 ಮಾತೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *