ಪುತ್ತೂರು :- ಕುಂಬ್ರದ ರಾಮಗಿರಿ ಶ್ರೀ ರಾಮ ಭಜನಾ ಮಂದಿರದಲ್ಲಿ 15 ಫೆಬ್ರವರಿ 2026 ರಂದು ‘ಹಿಂದೂ ರಾಷ್ಟ್ರ ಜಾಗೃತಿ ಸಭೆ’ ಎಂಬ ದೇಶದ್ರೋಹ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದಕ್ಕೆ ಆಕ್ಷೇಪ ಸಲ್ಲಿಸಿ ಕಾರ್ಯಕ್ರಮಕ್ಕೆ ಅನುಮತಿ ರದ್ದುಪಡಿಸಿ ಆಯೋಜಕರ ವಿರುಧ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಎಸ್.ಡಿ.ಪಿ.ಐ ಕುಂಬ್ರ ಬ್ಲಾಕ್ ಸಮಿತಿ ಅಧ್ಯಕ್ಷರಾದ ರಿಯಾಝ್ ಬಳಕ್ಕ ಹಾಗೂ ನಿಯೋಗವು ಸಂಪ್ಯ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿಯನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.




ಭಾರತವು ಸಂವಿಧಾನಬದ್ಧವಾಗಿ ಜಾತ್ಯತೀತ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಸಂವಿಧಾನದ ಪೀಠಿಕೆಯ ಆಶಯಕ್ಕೆ ವಿರುದ್ಧವಾಗಿ ಒಂದು ಧರ್ಮಕ್ಕೆ ಸೀಮಿತವಾದ ರಾಷ್ಟ್ರದ ಪರಿಕಲ್ಪನೆಯನ್ನು ಪ್ರಚಾರ ಮಾಡುವುದು ನೇರವಾಗಿ ರಾಷ್ಟ್ರ ವಿರೋಧಿ ಕೃತ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ದ್ವೇಷ ಬಿತ್ತುವ ಮತ್ತು ವಿವಿಧ ಸಮುದಾಯಗಳ ನಡುವೆ ವೈಮನಸ್ಸು ಉಂಟುಮಾಡುವ ಮೂಲಕ ಪುತ್ತೂರಿನ ಹಾಗೂ ಜಿಲ್ಲೆಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಾಧ್ಯತೆ ಇದೆ. ಜಾತ್ಯತೀತತೆಯು ಸಂವಿಧಾನದ ಅವಿಭಾಜ್ಯ ಅಂಗವೆಂದು ಸುಪ್ರೀಂ ಕೋರ್ಟ್ ಹಲವು ಬಾರಿ ಸ್ಪಷ್ಟಪಡಿಸಿದ್ದು, ಈ ತತ್ವಕ್ಕೆ ವಿರುದ್ಧವಾಗಿ ಜನರನ್ನು ಸಂಘಟಿಸುವುದು ಕಾನೂನುಬಾಹಿರವಾಗಿದೆ.
ಆದುದರಿಂದ, ರಾಷ್ಟ್ರದ ಏಕತೆ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ನಿಟ್ಟಿನಲ್ಲಿ, ಈ ಕಾರ್ಯಕ್ರಮಕ್ಕೆ ತಕ್ಷಣವೇ ತಡೆ ನೀಡಬೇಕು ಮತ್ತು ಆಯೋಜಕರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಡಿ.ಪಿ.ಐ ಕುಂಬ್ರ ಬ್ಲಾಕ್ ಕಾರ್ಯದರ್ಶಿ ಇರ್ಶಾದ್ ಜಾರತ್ತಾರ್, ಸದಸ್ಯರಾದ ರಿಯಾಝ್ ಜಾರತ್ತಾರ್ ನಿಯೋಗದಲ್ಲಿದ್ದರು.





