ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಪ್ರದೇಶದ ಸರ್ವೆ ನಂ 82/5 ರಲ್ಲಿ ಪಂಚಾಯತ್ ಪರವಾನಿಗೆ ಇಲ್ಲದೆ ಕಾರ್ಯಾಚರಿಸುತ್ತಿರುವ ಸುಮಾರು 32 ವಾಣಿಜ್ಯ ಅಂಗಡಿಗಳು ಮತ್ತು ವಸತಿಗೃಹಗಳ ಪ್ರಕರಣ ಇದೀಗ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.



ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗೆ ಬಂದ ದೂರಿನ ಆಧಾರದಲ್ಲಿ ಜನವರಿ 8ರಂದು ಭೂ ಮಾಲೀಕರಿಗೆ ಅಂಗಡಿಗಳನ್ನು ಬಂದ್ ಮಾಡಲು ನೋಟಿಸ್ ನೀಡಲಾಗಿತ್ತು. ಆದರೆ, ಆ ನೋಟಿಸ್‌ಗೆ ಯಾವುದೇ ಬೆಲೆ ನೀಡದೇ ಅಂಗಡಿಗಳು ಇನ್ನೂ ನಿರಂತರವಾಗಿ ಕಾರ್ಯಾಚರಿಸುತ್ತಿರುವುದು ದೊಡ್ಡ ಪ್ರಶ್ನೆಯನ್ನು ಹುಟ್ಟಿಸಿದೆ.




ಕೆಲ ದಿನಗಳ ಹಿಂದೆ ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಅಂಗಡಿಗಳನ್ನು ತೆರವುಗೊಳಿಸಲು ಸೂಚನೆ ನೀಡಿದರೂ, ಇಂದಿಗೂ ಯಾವುದೇ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಕಾರ್ಯವೈಖರಿಯ ಮೇಲೆ ಅನುಮಾನ ಮೂಡಿಸಿದೆ.
ಇದರ ನಡುವೆ ಈ ಹಿಂದೆ RTI ಮೂಲಕ ಕೇಳಿದ ಮಾಹಿತಿಗೆ ಸಂಬಂಧಿಸಿದ ದಾಖಲೆಗಳೇ ಇಲ್ಲವೆಂದು ಪಂಚಾಯತ್ ಉತ್ತರ ನೀಡಿರುವುದು ಕೇವಲ ನೋಟೀಸ್ ನೀಡಲಾಗಿದೆ ಎಂಬ ಮಾಹಿತಿ ನೀಡಿದ್ದು ಪ್ರಕರಣವನ್ನು ಇನ್ನಷ್ಟು ಗಂಭೀರಗೊಳಿಸಿದೆ. ದಾಖಲೆಗಳಿಲ್ಲದೆ ವಾಣಿಜ್ಯ ಚಟುವಟಿಕೆ ನಡೆಯುತ್ತಿರುವುದು ಕಾನೂನು ಉಲ್ಲಂಘನೆಯ ಸ್ಪಷ್ಟ ಉದಾಹರಣೆಯೆಂದು ಸ್ಥಳೀಯರು ಆರೋಪಿಸಿದ್ದಾರೆ.





ಇದಲ್ಲದೆ, 9/11 ಹಾಗೂ Conversion ಪಡೆಯಲು ದಲ್ಲಾಳಿಗಳ ಮೂಲಕ ಪ್ರಕ್ರಿಯೆ ಮುಂದುವರಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದ್ದು, ಇದು ದೊಡ್ಡ ಮಟ್ಟದ ಅಕ್ರಮ ಜಾಲದ ಸೂಚನೆ ನೀಡುತ್ತಿದೆ ಎಂಬ ಅನುಮಾನ ವ್ಯಕ್ತವಾಗಿದೆ.



ಈ ಬಗ್ಗೆ ಜಿಲ್ಲಾ ಪಂಚಾಯತ್ CEO, ತಾಲೂಕು ಪಂಚಾಯತ್ EO,ಸುಬ್ರಹ್ಮಣ್ಯ ಪಂಚಾಯತ್ PDO, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಪುತ್ತೂರು ಸಹಾಯಕ ಆಯುಕ್ತ ಹಾಗೂ ಕಡಬ ತಹಶೀಲ್ದಾರ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದರೂ, ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
“ನೋಟಿಸ್ ಕೊಟ್ಟರೂ ಕ್ರಮ ಇಲ್ಲ, ದಾಖಲೆಗಳಿಲ್ಲದಿದ್ದರೂ ವ್ಯಾಪಾರ ಮುಂದುವರಿಕೆ – ಇದಕ್ಕೆ ಕಾರಣವೇನು?” ಎಂಬ ಯಕ್ಷ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.
ಈ ಪ್ರಕರಣದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ? ಅಥವಾ ಅಕ್ರಮಕ್ಕೆ ಮೌನ ಬೆಂಬಲವೇ? ಎಂಬ ಪ್ರಶ್ನೆಗಳು ಉದ್ಭವವಾಗುತ್ತಿವೆ.
ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕದಿದ್ದರೆ, ಸಾರ್ವಜನಿಕ ಹಿತಾಸಕ್ತಿಗೆ ದೊಡ್ಡ ಧಕ್ಕೆಯಾಗುವ ಸಾಧ್ಯತೆ ಇದೆ.
ನೋಟಿಸ್, ದೂರುಗಳ ಬಳಿಕವೂ ಕ್ರಮವೇ ಇಲ್ಲದಿದ್ದು ಮುದುವರಿಯುತ್ತಿರುವ ಅಂಗಡಿಗಳು.

