ಧರ್ಮಸ್ಥಳ/ಬೆಂಗಳೂರು: ಧರ್ಮಸ್ಥಳ ಷಡ್ಯಂತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಸಲ್ಲಿಸಿರುವ ವರದಿಯಲ್ಲಿ ಹಲವು ಸ್ಫೋಟಕ ಹಾಗೂ ಕುತೂಹಲಕಾರಿ ಅಂಶಗಳು ಬಹಿರಂಗಗೊಂಡಿವೆ. ಅಪಪ್ರಚಾರಕ್ಕೆ ಬಳಸಲಾಗಿದೆ ಎನ್ನಲಾದ ‘ಬುರುಡೆ’ಯೊಂದಿಗೆ ಸಂಬಂಧಿಸಿದ ಘಟನೆಗಳು ಗ್ಯಾಂಗ್ ಸದಸ್ಯ ಜಯಂತ್ನನ್ನು ಮಾನಸಿಕವಾಗಿ ಬೆಚ್ಚಿಬೀಳುವಂತೆ ಮಾಡಿದ್ದವು ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ.



ಎಸ್ಐಟಿ ವರದಿಯ ಪ್ರಕಾರ, ಗ್ಯಾಂಗ್ ಸದಸ್ಯ ಜಯಂತ್ ಬುರುಡೆಯೊಂದಿಗೆ ಇದ್ದ ವೇಳೆ ಕೆಟ್ಟ ಕನಸುಗಳು ಬಿದ್ದು ಭಯಭೀತನಾಗಿದ್ದ. ಈ ಕಾರಣದಿಂದಾಗಿ, ರೈಲಿನಲ್ಲಿ ಬುರುಡೆ ತೆಗೆದುಕೊಂಡು ದೆಹಲಿಗೆ ತೆರಳಿದ್ದ ಜಯಂತ್, ಅಲ್ಲಿಂದ ಬುರುಡೆಯನ್ನು ದೆಹಲಿಯಲ್ಲೇ ಬಿಟ್ಟು ಬೆಂಗಳೂರಿಗೆ ವಾಪಸ್ ಆಗಿದ್ದಾನೆ. ಆದರೆ ನಂತರ ಮತ್ತೆ ಅದನ್ನು ತರುವ ನಿರ್ಧಾರ ಮಾಡಿ ದೆಹಲಿಗೆ ತೆರಳಿದ್ದಾನೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದೇ ಪ್ರಕರಣದಲ್ಲಿ ಇತರ ಆರೋಪಿಗಳಾದ ಚಿನ್ನಯ್ಯ, ಗಿರೀಶ್ ಮಟ್ಟಣ್ಣನವರ್ ಮತ್ತು ಸುಜಾತ ಭಟ್ ವಿಮಾನದ ಮೂಲಕ ದೆಹಲಿಗೆ ಪ್ರಯಾಣ ಮಾಡಿದ್ದರೆ, ಜಯಂತ್ ಮಾತ್ರ ಬುರುಡೆಯನ್ನು ರೈಲಿನಲ್ಲಿ ಕೊಂಡೊಯ್ದಿದ್ದಾನೆ ಎಂದು ಎಸ್ಐಟಿ ಸ್ಪಷ್ಟಪಡಿಸಿದೆ. ಮಲಗಿದ್ದ ವೇಳೆ ಜಯಂತ್ಗೆ ಭೀಕರ ಕನಸು ಬಿದ್ದು ಕಿರುಚಿಕೊಂಡಿದ್ದ ಘಟನೆಗೂ ವರದಿಯಲ್ಲಿ ಉಲ್ಲೇಖವಿದೆ.
ಇನ್ನೂ, ಸುಜಾತ ಭಟ್ಗೆ ಅರಿವಿಲ್ಲದೆ ಬುರುಡೆಯ ಪಕ್ಕದಲ್ಲೇ ಮಲಗಿದ್ದ ಘಟನೆ ಕೂಡ ಎಸ್ಐಟಿ ವರದಿಯಲ್ಲಿ ದಾಖಲಿಸಲಾಗಿದೆ. ಈ ಎಲ್ಲಾ ಘಟನೆಗಳು ಆರೋಪಿಗಳ ಮನಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರಿದ್ದವು ಎಂದು ತನಿಖಾ ತಂಡ ಅಭಿಪ್ರಾಯಪಟ್ಟಿದೆ.
ಬಳಿಕ, ಜಯಂತ್ ಮತ್ತೆ ವಿಮಾನದ ಮೂಲಕ ದೆಹಲಿಗೆ ತೆರಳಿ, ರೈಲಿನ ಮೂಲಕ ಬುರುಡೆಯನ್ನು ಬೆಂಗಳೂರಿಗೆ ತಂದು ತಿಮರೋಡಿ ಮನೆಯೊಂದಕ್ಕೆ ಕೊಂಡೊಯ್ದಿದ್ದಾನೆ ಎಂಬ ಅಂಶವೂ ಎಸ್ಐಟಿ ವರದಿಯಲ್ಲಿ ಉಲ್ಲೇಖಗೊಂಡಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ಈ ವಿವರಗಳು, ಧರ್ಮಸ್ಥಳ ಷಡ್ಯಂತ್ರ ಪ್ರಕರಣದ ಹಿಂದೆ ನಡೆದಿರುವ ಸಂಚು, ಅಪಪ್ರಚಾರದ ವಿಧಾನ ಹಾಗೂ ಆರೋಪಿಗಳ ಪಾತ್ರಗಳ ಬಗ್ಗೆ ಹೊಸ ಪ್ರಶ್ನೆಗಳನ್ನು ಎಬ್ಬಿಸಿದ್ದು, ತನಿಖೆ ಇನ್ನಷ್ಟು ತೀವ್ರಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.
