ಪುತ್ತೂರು:
ಅಂತಾರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆಯ ಅಂಗವಾಗಿ ಜಿಲ್ಲೆಯ ವಿವಿಧ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಾಹಿತಿ ಕಾರ್ಯಕ್ರಮವು ಮುರಿನಲ್ಲಿರುವ ಶಿವಸದನ ಮಕ್ಕಳ ವಸತಿ ಶಾಲೆಯಲ್ಲಿ ಜರುಗಿತು. ಮಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವೆಗಳ ಸಮಿತಿ ಪುತ್ತೂರು, ವಕೀಲರ ಸಂಘ (ರಿ.) ಪುತ್ತೂರು ಹಾಗೂ ಶಿವಸದನ ಚಾರಿಟೇಬಲ್ ಟ್ರಸ್ಟ್, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಪುತ್ತೂರು ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ಶ್ರೀ ಯೋಗೇಂದ್ರ ಶೆಟ್ಟಿ ಉದ್ಘಾಟಿಸಿದರು. ಅವರು ಮಕ್ಕಳಿಗೆ ಹಣ್ಣು ಹಂಪಲು ನೀಡಿ ಶುಭ ಹಾರೈಸಿದರು. ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಯದುರಾಜ್ ಅವರು ಆರೋಗ್ಯ ಜಾಗೃತಿ ಕುರಿತು ಮಾಹಿತಿ ನೀಡಿದರು.
ಶಿವಸದನ ಚಾರಿಟೇಬಲ್ ಟ್ರಸ್ಟ್ನ ಗೌರವಾಧ್ಯಕ್ಷ ರಘುನಾಥ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದರು. ವಕೀಲರ ಸಂಘದ ಅಧ್ಯಕ್ಷ ಜಿ. ಜಗನ್ನಾಥ ರೈ ಮತ್ತು ಖಜಾಂಜಿ ಮಹೇಶ್ ಸವಣೂರು ಶುಭ ಹಾರೈಸಿದರು.


ವೇದಿಕೆಯಲ್ಲಿ ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಮೊಹಮ್ಮದ್ ರಫೀಕ್, ಪ್ಯಾನೆಲ್ ವಕೀಲರು ರಾಜೇಶ್ವರಿ, ಚಂದ್ರಾವತಿ ಉಪಸ್ಥಿತರಿದ್ದರು.

ಶಿವಸದನ ಟ್ರಸ್ಟ್ನ ಸುವನ್ ಕೃಷ್ಣ ಸ್ವಾಗತಿಸಿ, ಕೋಶಾಧಿಕಾರಿ ದಿನಕರ ರಾವ್ ವಂದಿಸಿದರು. ಕಾರ್ಯದರ್ಶಿ ಕರುಣ್ ರಾವ್ ಬೆಳ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ನಯನ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಸಮಿತಿಯ ಸಿಬ್ಬಂದಿಗಳಾದ ಜ್ಯೋತಿ ಮತ್ತು ಗಗನ್ ರಾಜ್ ಹಾಜರಿದ್ದರು.





