ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಅಂಗವಾಗಿ, ಶ್ರೀ ದೇವಳದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ದೇವರಿಗೆ ಬೃಹತ್ ಹಸಿರು ಕಾಣಿಕೆ ಸಮರ್ಪಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಒಟ್ಟಾಗಿ ಸಂಗ್ರಹಿಸಿದ ಸುವಸ್ತುಗಳನ್ನು ವಿಶೇಷವಾಗಿ ಅಲಂಕರಿಸಿದ ವಾಹನಗಳಲ್ಲಿ ದೇವಳಕ್ಕೆ ಕೊಂಡೊಯ್ಯಲಾಯಿತು.

ವಿದ್ಯಾರ್ಥಿಗಳಿಂದ ಸಮರ್ಪಿಸಲಾದ ಸುವಸ್ತುಗಳು:

1290 ಕೆಜಿ (12 ಕ್ವಿಂಟಾಲ್ 90 ಕೆಜಿ) ಸೋನಾಮಸೂರಿ ಅಕ್ಕಿ

1650 ಕೆಜಿ (16 ಕ್ವಿಂಟಾಲ್ 50 ಕೆಜಿ) ತರಕಾರಿಗಳು

1850 ತೆಂಗಿನಕಾಯಿ

261 ಕೆಜಿ ಬೆಲ್ಲ

200 ಕೆಜಿ ಸಕ್ಕರೆ

700 ಹಣ್ಣು ಅಡಿಕೆ

1.5 ಕೆಜಿ ಏಲಕ್ಕಿ, ದನದ ತುಪ್ಪ, ಹಿಂಗಾರ, ಜೇನುತುಪ್ಪ, ಬಾಳೆಹಣ್ಣು, ಬಾಳೆಗೊನೆ, ಬಾಳೆ ಎಲೆ, ಕಾಳು ಮೆಣಸು, ಸೀಯಾಳ ಸೇರಿದಂತೆ ಹಲವು ವಸ್ತುಗಳು

ಸೌತೆ, ಕುಂಬಳಕಾಯಿ, ಸೀಮೆಬದನೆ, ಆಲೂಗೆಡ್ಡೆ, ಚೀನಿಕಾಯಿ, ಟೊಮೇಟೋ, ಹೀರೇಕಾಯಿ, ಅಲಸಂಡೆ, ಸುವರ್ಣಗೆಡ್ಡೆ, ಸೋರೆಕಾಯಿ, ಬದನೆ, ಕ್ಯಾರೆಟ್ ಮತ್ತಿತರ ತರಕಾರಿಗಳನ್ನು ಸೇರಿಸಿ ಒಟ್ಟು 1650 ಕೆಜಿ ತರಕಾರಿ

ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದ ಸುವಸ್ತುಗಳನ್ನು ತರಗತಿಗಳಲ್ಲಿ ಸಂಗ್ರಹಿಸಿ ನಂತರ ರಂಗ ಮಂದಿರಕ್ಕೆ ಸ್ಥಳಾಂತರಿಸಿದರು. ಅಲ್ಲದೆ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಹಿರಿಯ ವಿದ್ಯಾರ್ಥಿ ಗಗನ್ ಮತ್ತು ತಂಡ ನೀಡಿದ ಧನದ ನೆರವಿನಿಂದ ಹೆಚ್ಚುವರಿ ಅಕ್ಕಿ, ಬೆಲ್ಲ, ಸಕ್ಕರೆ ಮತ್ತು ತರಕಾರಿಯನ್ನು ಖರೀದಿಸಲಾಯಿತು.

ಪೂಜೆ ಹಾಗೂ ಪ್ರಾರ್ಥನೆ:
ರಂಗಮಂದಿರದಲ್ಲಿ ಸುವಸ್ತುಗಳನ್ನು ಒಟ್ಟುಗೂಡಿಸಿದ ನಂತರ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ್ ನಾಯಕ್ ದೀಪ ಬೆಳಗಿ ಪ್ರಾರ್ಥನೆ ನೆರವೇರಿಸಿದರು. ಹಿರಿಯ ಸಹಶಿಕ್ಷಕ ಎಂ. ಕೃಷ್ಣ ಭಟ್ ಸುವಸ್ತುಗಳಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲಂಕರಿಸಿದ ವಾಹನಗಳ ಮೂಲಕ ಹಸಿರು ಕಾಣಿಕೆಯನ್ನು ದೇವಳಕ್ಕೆ ಕೊಂಡೊಯ್ಯಲಾಯಿತು.

ದೇವಳಕ್ಕೆ ಹಸ್ತಾಂತರ:
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪ್ರಾಂಶುಪಾಲ ಸೋಮಶೇಖರ್ ನಾಯಕ್ ಅವರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಹಿಂಗಾರ ನೀಡುವ ಮೂಲಕ ಹಸಿರು ಕಾಣಿಕೆಯನ್ನು ಅಧಿಕೃತವಾಗಿ ಹಸ್ತಾಂತರಿಸಿದರು.

ಈ ವೇಳೆ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ಸಮಿತಿ ಸದಸ್ಯರು ಸೌಮ್ಯಾ ಭರತ್, ಪ್ರವೀಣ ರೈ ಮರುವಂಜ, ಲೋಲಾಕ್ಷ ಕೈಕಂಬ, ಪವನ್ ಎಂ.ಡಿ., ಶ್ರೀಮಂತ ಜೋಳದಪ್ಪಗೆ, ಎನ್.ಸಿ.ಸುಬ್ಬಪ್ಪ, ಶಂಕರಣ್ಣ, ಮಂಜುನಾಥ್ ಸೇರಿದಂತೆ ಅನೇಕರು ಹಾಜರಿದ್ದರು.

ಹರೀಶ್ ಎಸ್. ಇಂಜಾಡಿ, ಅಧ್ಯಕ್ಷ, ವ್ಯವಸ್ಥಾಪನಾ ಸಮಿತಿ —
“ವಿದ್ಯಾರ್ಥಿಗಳು ಸಲ್ಲಿಸಿದ ಈ ಬೃಹತ್ ಹಸಿರು ಕಾಣಿಕೆ ದೇವರಿಗೆ ಪ್ರೀತಿಪಾತ್ರವಾಗಲಿ. ಅವರ ಭವಿಷ್ಯ ಪ್ರಗತಿಪರವಾಗಿರಲಿ. ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಸುಬ್ರಹ್ಮಣ್ಯದ ಅನುಗ್ರಹ ಇರಲಿ.”ಎಂದು ಹಾರೈಸಿದರು.

ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿ —
“ವಿದ್ಯಾರ್ಥಿಗಳು ಹಾಗೂ ಬೋಧಕ-ಬೋದಕೇತರ ಸಿಬ್ಬಂದಿ ಸಲ್ಲಿಸಿದ ಈ ಸೇವೆ ಭಗವಂತನ ಕೃಪೆಗೆ ಪಾತ್ರವಾಗಲಿ. ವಿದ್ಯಾಸಂಸ್ಥೆಯ ಅಭಿವೃದ್ಧಿ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ.”ಎಂದು ಹರಸಿದರು.

Leave a Reply

Your email address will not be published. Required fields are marked *