ಪುತ್ತೂರಿನ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಧ್ಯಪ್ರಾಚ್ಯ ಯುದ್ಧದ ಪರಿಣಾಮವಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಹಿನ್ನೆಲೆ ದೇವಸ್ಥಾನದ ಅಡುಗೆಮನೆ ಮತ್ತೆ ಕಟ್ಟಿಗೆಯ ಒಲೆಗೆ ಶಿಫ್ಟ್ ಆಗಿದೆ.

ಕ್ಷೇತ್ರದಲ್ಲಿ ಪ್ರತಿದಿನ ನಡೆಯುವ ಅನ್ನದಾನ ಸೇವೆಯಲ್ಲಿ ಸುಮಾರು 3 ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ. ಇದಕ್ಕಾಗಿ ದಿನಕ್ಕೆ 4 ರಿಂದ 5 ಗ್ಯಾಸ್ ಸಿಲಿಂಡರ್‌ಗಳ ಅಗತ್ಯವಿದ್ದು, ಇತ್ತೀಚೆಗೆ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು ಜೊತೆಗೆ ಬೆಲೆ ಏರಿಕೆಯಾದ ಹಿನ್ನೆಲೆ ದೇವಸ್ಥಾನ ಆಡಳಿತ ಮಂಡಳಿ ಕಟ್ಟಿಗೆಯ ಒಲೆಯನ್ನು ಸಿದ್ಧಪಡಿಸಿ ಆಹಾರ ತಯಾರಿಸಲು ಆರಂಭಿಸಿದೆ.

ಈಗಾಗಲೇ ಮೂರು ಲೋಡ್ ಕಟ್ಟಿಗೆ ಕ್ಷೇತ್ರಕ್ಕೆ ಆಗಮಿಸಿದ್ದು, ಇನ್ನಷ್ಟು ಕಟ್ಟಿಗೆಯನ್ನು ಸಂಗ್ರಹಿಸುವ ಕಾರ್ಯವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಆರಂಭಿಸಿದೆ. ಕಟ್ಟಿಗೆ ಇರುವ ಭಕ್ತರು ದೇವಸ್ಥಾನಕ್ಕೆ ಮಾಹಿತಿ ನೀಡಿದರೆ ದೇವಸ್ಥಾನದ ವತಿಯಿಂದಲೇ ವಾಹನ ವ್ಯವಸ್ಥೆ ಮಾಡಿ ತರಲು ನಿರ್ಧಾರ ಕೈಗೊಳ್ಳಲಾಗಿದೆ.
ಇದೇ ವೇಳೆ ಏಪ್ರಿಲ್ ತಿಂಗಳಲ್ಲಿ ಕ್ಷೇತ್ರದಲ್ಲಿ ನಡೆಯಲಿರುವ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ಸುಮಾರು 2.5 ಲಕ್ಷ ಭಕ್ತರು ಕ್ಷೇತ್ರಕ್ಕೆ ಆಗಮಿಸುವ ನಿರೀಕ್ಷೆಯಿರುವುದರಿಂದ ಅನ್ನದಾನ ವ್ಯವಸ್ಥೆ ನಿರಂತರವಾಗಿರಲು ಕಟ್ಟಿಗೆ ಸಂಗ್ರಹಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.

Leave a Reply

Your email address will not be published. Required fields are marked *