ಕಡಬ: ಕೇಂದ್ರ ಸರಕಾರದ ಹವಾಮಾನ ಆಧಾರಿತ ಫಸಲ್ ಭೀಮಾ ಯೋಜನೆಯಡಿಯಲ್ಲಿ ಈ ಬಾರಿ ಫಲಾನುಭವಿ ರೈತರಿಗೆ ಸರಿಯಾದ ರೀತಿಯಲ್ಲಿ ವಿಮಾ ಪರಿಹಾರ ದೊರೆಯದೇ ಇರುವುದರ ವಿರುದ್ಧ ಜ. 12ರಂದು ಕಡಬದ ತಹಶೀಲ್ದಾರ್ ಕಚೇರಿಯ ಮುಂದೆ ಮಲೆನಾಡು ಜನ ಹಿತ ರಕ್ಷಣ ವೇದಿಕೆಯ ಕಡಬ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ದಾಮೋದರ ಗುಂಡ್ಯ ಹೇಳಿದರು.
ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೃಷಿಕರು ಅಡಿಕೆ ಮತ್ತು ಕಾಳುಮೆಣಸು ಬೆಳೆಗಳಿಗೆ ಪ್ರತೀ ವರ್ಷ ಹೆಕ್ಟೇರ್ ಒಂದಕ್ಕೆ 6,400 ರೂ. ಮೊತ್ತವನ್ನು ಪ್ರೀಮಿಯಂ ರೂಪದಲ್ಲಿ ವಿಮಾ ಕಂಪೆನಿಗೆ ಪಾವತಿ ಮಾಡುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ತಾಪಮಾನ ಏರಿಕೆ -ಇಳಿಕೆ ಮತ್ತು ಚಳಿಯ ಪ್ರಮಾಣ ಇವುಗಳನ್ನು ಆಧರಿಸಿ ಫಸಲಿನಲ್ಲಿ ಆಗಬಹುದಾದ ವ್ಯತ್ಯಾಸಗಳಿಗೆ ಸರಿಯಾಗಿ ಬೆಳೆ ನಷ್ಟವನ್ನು ಪರಿಗಣಿಸಿ ವಿಮಾ ಕಂಪೆನಿಯು ಪರಿಹಾರವನ್ನು ಪಾವತಿಸಬೇಕು. ಆದರೆ ಈ ಬಾರಿ ಸರಿಯಾದ ರೀತಿಯಲ್ಲಿ ವಿಮಾ ಪರಿಹಾರ ಪಾವತಿಯಾಗಿಲ್ಲ ಎಂದು ಹೇಳಿದರು.




ವಿಮಾ ಕಂಪನಿಯು ದೈನಂದಿನ ಹವಾಮಾನ ವೈಪರೀತ್ಯ, ಗ್ರಾಮ ಪಂಚಾಯತ್‌ಗಳಲ್ಲಿ ಅಳವಡಿಸ ಲಾಗಿರುವ ಮಳೆ ಮಾಪಕದ ಅಂಕಿ ಅಂಶ ಪರಿಗಣಿಸಿ ವಿಮೆ ಮೊತ್ತವನ್ನು ನಿರ್ಧರಿಸಬೇಕು. ಉಪಗ್ರಹದ ಮೂಲಕ ಹವಾಮಾನ ವೈಪರೀತ್ಯವನ್ನು ಗುರುತಿಸಿ ಪರಿಹಾರ ನೀಡುವ ಈ ಯೋಜನೆಗೆ ಉಪಗ್ರಹ ಆಧಾರಿತ ಬೆಳೆ ವಿಮಾ ಯೋಜನೆ ಎಂದೆ ಹೆಸರು ನೀಡಲಾಗಿದೆ. ಕಳೆದ
ಕೆಲವು ವರ್ಷಗಳಲ್ಲಿ ರೈತರಿಗೆ ಹೆಚ್ಚಿನ ವಿಮಾ ಮೊತ್ತ ಪಾವತಿಯಾಗಿತ್ತು. ಎಕರೆಗೆ 60,000 ರೂ.ಗಳಿಗಿಂತಲೂ ಹೆಚ್ಚಿನ ಮೊತ್ತ ಬಿಡುಗಡೆಯಾಗಿತ್ತು. ಆದರೆ, ಈ ವರ್ಷ ಅತ್ಯಂತ ಕನಿಷ್ಠ ಬೆಲೆ ನಿಗದಿ ಮಾಡಲಾಗಿದ್ದು, ಕೇವಲ 15 ಸಾವಿರ ರೂ. ಬಿಡುಗಡೆಯಾಗಿದೆ ಎಂದು ಹೇಳಿದರು.
ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ ರಮಾನಂದ ಎಣ್ಣೆಮಜಲು ಉಪಸ್ಥಿತರಿದ್ದರು.
..
ಕೃಷಿಕರ ಆರೋಪಗಳೇನು?
@ ಕಳೆದ ಎರಡು ವರ್ಷಗಳಲ್ಲಿ ಅತಿವೃಷ್ಟಿಯಿಂದಾಗಿ ರೈತರ ಅಡಿಕೆ ಮತ್ತು ಕಾಳುಮೆಣಸು ಬೆಳೆಗಳು ಸಂಪೂರ್ಣ ನಾಶಗೊಂಡಿದೆ. ಜತೆಗೆ ಎಲೆಚುಕ್ಕಿ ರೋಗವು ಬಾಧಿಸಿ ರೈತ ಕಂಗಾಲಾಗಿದ್ದಾನೆ. ಈಗ ವಿಮಾ ಕಂಪೆನಿಯ ಮೋಸ ಗಾಯದ ಮೇಲೆ ಬರೆ ಎಳೆದಂತಾಗಿದೆ.
ವಿಮಾ ಕಂಪೆನಿಯು ಸರಕಾರ ಮತ್ತು ರೈತರಿಂದ ಸಂಗ್ರಹಿಸಿದ ಹಣದಲ್ಲಿ ತನ್ನ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿರುವ ಸಂಶಯ ಕೃಷಿಕರಿಗೆ ಕಾಡುತ್ತಿದೆ.
@ ಹವಾಮಾನದಲ್ಲಾದ ಬದಲಾವಣೆಯ ಅಂಶಗಳನ್ನು ಸರಿಯಾಗಿ ಸಂಗ್ರಹಿಸದ ಕಾರಣದಿಂದಾಗಿ ಈ ಬಾರಿ ಅತೀ ಹೆಚ್ಚು ಮಳೆಯಾಗಿದ್ದರೂ ಸರಿಯಾದ ವಿಮಾ ಪರಿಹಾರ ದೊರತಿಲ್ಲ.




