ಪುತ್ತೂರು, ಫೆ.16: ಇಲ್ಲಿನ ಮಹಿಳಾ ಸರಕಾರಿ ಪದವಿ ಕಾಲೇಜಿನಲ್ಲಿ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದ ಉಂಟಾಗುತ್ತಿರುವ ಧೂಳಿನ ಸಮಸ್ಯೆಗೆ ವಿರೋಧವಾಗಿ ಸೋಮವಾರ ವಿದ್ಯಾರ್ಥಿನಿಯರು ತರಗತಿ ತೊರೆದು ರಸ್ತೆ ಧರಣಿ ನಡೆಸಿದ ಘಟನೆ ನಡೆದಿದೆ.
ಕಾಲೇಜು ಸಂಪರ್ಕ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿನಿಯರು ಕುಳಿತು ಧರಣಿ ನಡೆಸಿ, ಧೂಳಿನಿಂದ ಉಸಿರಾಟದ ಸಮಸ್ಯೆ ಉಂಟಾಗುತ್ತಿದ್ದು ಕೆಲವರು ಆಸ್ಪತ್ರೆಗೆ ಸೇರಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ನ್ಯಾಯ ಸಿಗದಿದ್ದರೆ ರಸ್ತೆ ಬಿಡುವುದಿಲ್ಲ” ಎಂದು ಘೋಷಣೆ ಕೂಗಿದರು. ವಿದ್ಯಾರ್ಥಿನಿಯರಾದ ಚೈತನ್ಯ, ಭೂಮಿಕಾ, ಅರ್ಚನ ಮೊದಲಾದವರು ಸಮಸ್ಯೆಯನ್ನು ವಿವರಿಸಿದರು.
ಶಾಸಕರ ಭೇಟಿ, ಮಾತಿನ ಚಕಮಕಿ;
ಪ್ರತಿಭಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಆಗಮಿಸಿ, “ಪ್ರತಿಭಟನೆ ಸರಿಯಲ್ಲ, ಹೊಸ ಕಟ್ಟಡಕ್ಕೆ ಅನುದಾನ ತರಿಸಿದ್ದು ನಾನೇ. ತರಗತಿಗೆ ತೆರಳಿ” ಎಂದು ವಿದ್ಯಾರ್ಥಿನಿಯರಿಗೆ ಮನವಿ ಮಾಡಿದರು. ಸಮಸ್ಯೆಯನ್ನು ತನ್ನ ಗಮನಕ್ಕೆ ತರದಿರುವ ಬಗ್ಗೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.





ಈ ವೇಳೆ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಐವನ್ ಪ್ರಾನ್ಸಿಸ್ ಲೋಬೋ ಅವರು ಧೂಳಿನಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗೆ ಸೇರಿರುವ ವಿಷಯವನ್ನು ವಿವರಿಸಲು ಮುಂದಾದಾಗ ಶಾಸಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
“ಮನವಿ ಕೊಟ್ಟಿದ್ದೇವೆ” – ವಿದ್ಯಾರ್ಥಿನಿಯರ ಉತ್ತರ
ಕಾಲೇಜಿನ ಕಟ್ಟಡದ ಒಂದು ಭಾಗದಲ್ಲಿ ಡಯಾಲಿಸಿಸ್ ಸೆಂಟರ್ ಸ್ಥಾಪನೆಗೆ ಸಂಬಂಧಿಸಿದ ಕಾಮಗಾರಿ ನಡೆಯುತ್ತಿದ್ದು, ಕಳೆದ ಕೆಲ ತಿಂಗಳಿಂದ ಧೂಳು ತರಗತಿ ಕೊಠಡಿಗಳೊಳಗೆ ಹರಡುತ್ತಿದೆ. “ನಾವು ಈಗಾಗಲೇ ಮನವಿ ಸಲ್ಲಿಸಿದ್ದೇವೆ” ಎಂದು ವಿದ್ಯಾರ್ಥಿನಿಯರು ಶಾಸಕರಿಗೆ ಸ್ಪಷ್ಟಪಡಿಸಿದರು.
2014ರಲ್ಲಿ ಆರಂಭವಾದ ಈ ಕಾಲೇಜಿನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ. ಹನ್ನೆರಡು ವರ್ಷಗಳಿಂದ ಹೊಸ ಕಟ್ಟಡದ ನಿರೀಕ್ಷೆಯಲ್ಲಿದ್ದೇವೆ ಎಂದು ವಿದ್ಯಾರ್ಥಿನಿಯರು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ರೈ, “ಮುಂದಿನ 45 ದಿನಗಳಲ್ಲಿ ಹೊಸ ಕಟ್ಟಡ ಉದ್ಘಾಟನೆ ನಡೆಯಲಿದೆ. ಧೂಳಿನ ಸಮಸ್ಯೆ ತಕ್ಷಣ ಪರಿಹರಿಸಲಾಗುತ್ತದೆ” ಎಂದು ಭರವಸೆ ನೀಡಿದರು. ಆದರೆ “ಅದು ಸತ್ಯವೇ ಸರ್?” ಎಂದು ವಿದ್ಯಾರ್ಥಿನಿಯರು ಮರುಪ್ರಶ್ನಿಸಿದ ಘಟನೆ ನಡೆಯಿತು.



ತರಗತಿ ಕೊಠಡಿಗಳನ್ನು ವೀಕ್ಷಿಸಿದ ಬಳಿಕ ಗುತ್ತಿಗೆದಾರರಿಗೆ ಕ್ರಮ ಕೈಗೊಳ್ಳಲು ಸೂಚಿಸಿದ ಶಾಸಕ ರೈ, ಪ್ರಾಂಶುಪಾಲೆ ವೇದಶ್ರೀ ನಿಡ್ಯ ಅವರಿಗೆ “ಸಮಸ್ಯೆ ಬಂದಾಗ ನನ್ನ ಗಮನಕ್ಕೆ ತರಬೇಕು” ಎಂದರು. ಇದಕ್ಕೆ ಪ್ರಾಂಶುಪಾಲೆಯು “ಕಾಮಗಾರಿ ವೇಳೆ ಧೂಳು ಬರುವುದು ಸಾಮಾನ್ಯ. ಸುಮ್ಮನೆ ಟೈಮ್ ವೇಸ್ಟ್ ಮಾಡುವುದು ಬೇಡ” ಎಂದು ಖಡಕ್ ಉತ್ತರ ನೀಡಿದ ಘಟನೆ ನಡೆದಿದೆ.

ಈ ವೇಳೆ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಬಿಜೆಪಿ ಮುಖಂಡರು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿಯರ ಅಳಲು ಆಲಿಸಿದರು. “ಐದು ಕೋಟಿ ಅನುದಾನ ಬಂದಿದ್ದು ಐದು ವರ್ಷ ಸಮೀಪಿಸಿದರೂ ಕಟ್ಟಡ ಪೂರ್ಣವಾಗಿಲ್ಲ. ರಾಜ್ಯ ಸರಕಾರದ ನಿರ್ಲಕ್ಷ್ಯದಿಂದ ಈ ಸ್ಥಿತಿ ಉಂಟಾಗಿದೆ” ಎಂದು ಸಂಜೀವ ಮಠಂದೂರು ಆರೋಪಿಸಿದರು.
ಇದಕ್ಕೆ ಪ್ರತಿಯಾಗಿ ಶಾಸಕ ರೈ, “ಹಿಂದಿನ ಶಾಸಕರಾಗಿದ್ದವರು ತಮ್ಮ ಅವಧಿಯಲ್ಲಿ ಏಕೆ ಕಟ್ಟಡ ನಿರ್ಮಿಸಲಿಲ್ಲ? ಅವರದ್ದೇ ಸರಕಾರ ಇರುವಾಗ ಒಂದು ರೂಪಾಯಿಯನ್ನೂ ತರಲಿಲ್ಲ. ಅವರ ಕುಮ್ಮಕ್ಕಿನಿಂದಲೇ ಪ್ರತಿಭಟನೆ ನಡೆದಿದೆ” ಎಂದು ತಿರುಗೇಟು ನೀಡಿದರು.

ಮುಂದಿನ 45 ದಿನಗಳಲ್ಲಿ ಬೊಳುವಾರಿನ ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಿಸುವುದಾಗಿ ಹಾಗೂ ಧೂಳಿನ ಸಮಸ್ಯೆ ತಕ್ಷಣ ಪರಿಹರಿಸುವಂತೆ ಗುತ್ತಿಗೆದಾರರಿಗೆ ಸೂಚಿಸುವುದಾಗಿ ಶಾಸಕ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆಯನ್ನು ಹಿಂಪಡೆದರು.
ಘಟನಾ ಸ್ಥಳದಲ್ಲಿ ತಹಶೀಲ್ದಾರ್ ಕೂಡಲಗಿ, ಡಿವೈಎಸ್ಪಿ ಪ್ರಮೋದ್ ಕುಮಾರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

