ಉಪ್ಪಿನಂಗಡಿ:
ಉಪ್ಪಿನಂಗಡಿ ಸಮೀಪದ ಪೆರ್ನೆ ಮತ್ತು ಬಿಳಿಯೂರು ಗ್ರಾಮಗಳ ಬಳಪು, ತುರ್ವೆರೆ ಗುರಿ, ಪೂ ಪಾಡಿಕಲ್ಲು ಹಾಗೂ ಕುಂಕಂತೋಟ ಪ್ರದೇಶಗಳಲ್ಲಿ ಕಾಡ್ಗಿಚ್ಚು ಉಂಟಾಗಿ ಭಾರೀ ಪ್ರಮಾಣದಲ್ಲಿ ಕಾಡಿನ ಸಂಪತ್ತು ಹಾನಿಗೊಳಗಾದ ಘಟನೆ ನಡೆದಿದೆ.



ಪೆರ್ನೆ ಗ್ರಾಮದಲ್ಲಿ ವಿದ್ಯುತ್ ತಂತಿಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ವ್ಯಾಪಕವಾಗಿ ಹರಡಿ ಬಿಳಿಯೂರು ಹಾಗೂ ಕೋಡಿಂಬಾಡಿ ಪ್ರದೇಶದ ನೆಡುತೋಪುಗಳನ್ನು ಆವರಿಸಿತು. ಪರಿಣಾಮ ಈ ಪ್ರದೇಶದಲ್ಲಿದ್ದ ಸಾವಿರಾರು ಗೇರು ಮರಗಳು ಸೇರಿದಂತೆ ಅನೇಕ ಕಾಡುಮರಗಳು ಬೆಂಕಿಗೆ ಆಹುತಿಯಾಗಿ ಅಪಾರ ನಷ್ಟ ಸಂಭವಿಸಿದೆ.


ಕಾಡ್ಗಿಚ್ಚು ವ್ಯಾಪಕವಾಗುತ್ತಿದ್ದಂತೆಯೇ ಗೇರು ಅಭಿವೃದ್ಧಿ ನಿಗಮ, ಅರಣ್ಯ ಇಲಾಖೆಯ ಅಧಿಕಾರಿಗಳು, ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಹಕಾರದೊಂದಿಗೆ ಬೆಂಕಿಯನ್ನು ನಿಯಂತ್ರಿಸಲು ತೀವ್ರ ಪ್ರಯತ್ನ ನಡೆಸಲಾಯಿತು. ಈ ವೇಳೆ ಅರಣ್ಯ ವೀಕ್ಷಕ ಶೇಖರ ಪೂಜಾರಿ ಅವರು ಬೆಂಕಿಯನ್ನು ನಿಯಂತ್ರಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಕಾಡ್ಗಿಚ್ಚಿನ ಕೆನ್ನಾಲೆಯಿಂದ ತಪ್ಪಿಸಿಕೊಂಡು ಬಂದ ವಿಷಪೂರಿತ ಹಾವೊಂದು ಅವರಿಗೆ ಕಚ್ಚಿದೆ. ತಕ್ಷಣ ಅಸ್ವಸ್ಥಗೊಂಡ ಅವರನ್ನು ಕಾರ್ಯಾಚರಣೆಯಲ್ಲಿ ತೊಡಗಿದ್ದ ನೆಡುತೋಪು ಅಧೀಕ್ಷಕ ರವಿಪ್ರಸಾದ್ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಒದಗಿಸಿದರು.




ಬೆಂಕಿ ನಿಯಂತ್ರಣ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳಾದ ಕಾಂತರಾಜು, ಸುಧೀರ್ ಹೆಗ್ಡೆ, ಉಲ್ಲಾಸ್ ಮೊದಲಾದವರು ಭಾಗವಹಿಸಿದ್ದರು. ಪುತ್ತೂರಿನ ಅಗ್ನಿಶಾಮಕ ದಳವು ಹಲವು ಬಾರಿ ನೀರು ತುಂಬಿಸಿಕೊಂಡು ಆಗಮಿಸಿ ಬೆಂಕಿಯನ್ನು ನಿಯಂತ್ರಿಸಲು ಶ್ರಮಿಸಿತು.
ಕಾಡ್ಗಿಚ್ಚು ಸಂಭವಿಸಿದ ಪ್ರದೇಶದ ಸಮೀಪ ಜನವಸತಿ ಇರುವುದರಿಂದ ಹೆಚ್ಚಿನ ಅನಾಹುತ ಸಂಭವಿಸದಂತೆ ಸ್ಥಳೀಯರು ಹಾಗೂ ಇಲಾಖಾಧಿಕಾರಿಗಳು ಎಚ್ಚರಿಕೆ ವಹಿಸಿ ಕಾರ್ಯಾಚರಣೆ ನಡೆಸಿದರು.


