ಬೆಳ್ತಂಗಡಿಯಲ್ಲಿ ನಿಗೂಢ ಘಟನೆ

ಬೆಳ್ತಂಗಡಿ: ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಯಲ್ಲಿ ಭಾಗವಹಿಸಲು ಮನೆಯಿಂದ ಹೊರಟಿದ್ದ ಬಾಲಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದು, ಹುಡುಕಾಟದ ಬಳಿಕ ಆತನ ಶವ ತೋಟದ ಬಾವಿಯಲ್ಲಿ ಪತ್ತೆಯಾದ ದುರ್ಘಟನೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದಲ್ಲಿ ಬುಧವಾರ (ಜ.14) ನಡೆದಿದೆ.

ಮೃತ ಬಾಲಕನನ್ನು ಓಡಿಲ್ನಾಳ ಗ್ರಾಮದ ಸಂಭೋಳ್ಯ ಬರಮೇಲ್ ನಿವಾಸಿ ಸುಬ್ರಮಣ್ಯ ನಾಯ್ಕ್ ಅವರ ಪುತ್ರ ಸುಮಂತ್ (9ನೇ ತರಗತಿ ವಿದ್ಯಾರ್ಥಿ) ಎಂದು ಗುರುತಿಸಲಾಗಿದೆ. ಸುಮಂತ್ ಜ.14ರ ಬೆಳಿಗ್ಗೆ ಧನುಪೂಜೆಗೆಂದು ದೇವಸ್ಥಾನಕ್ಕೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದನು. ಆದರೆ ಸಂಜೆ ತನಕ ಮನೆಗೆ ಮರಳದೆ ಇದ್ದುದರಿಂದ ಆತ ನಾಪತ್ತೆಯಾಗಿರುವ ಬಗ್ಗೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ಆರಂಭಿಸಿದ್ದರು.

ಹುಡುಕಾಟದ ವೇಳೆ ಬಾಲಕ ತೆರಳಿದ ದಾರಿಯಲ್ಲಿ ರಕ್ತದ ಕಲೆಗಳು ಸ್ಥಳೀಯರಿಗೆ ಕಂಡು ಬಂದಿದ್ದು, ಅನುಮಾನ ಹೆಚ್ಚಾಗಿದೆ. ವಿಷಯ ತಿಳಿದ ತಕ್ಷಣ ಅರಣ್ಯ ಇಲಾಖೆ ಸಿಬ್ಬಂದಿ, ಪೊಲೀಸ್ ಇಲಾಖೆ ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ನಡೆಸಿದರು. ನಂತರ ಸಮೀಪದ ತೋಟವೊಂದರ ಬಾವಿಯಲ್ಲಿ ಬಾಲಕನ ಶವ ಪತ್ತೆಯಾಯಿತು.
ಘಟನೆಯ ಮಾಹಿತಿ ಪಡೆದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಬೆಳ್ತಂಗಡಿ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶವವನ್ನು ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬಾಲಕನ ಸಾವಿನ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಅಪಘಾತವೋ ಅಥವಾ ಬೇರೆ ಕಾರಣವಿದೆಯೋ ಎಂಬ ಬಗ್ಗೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈ ದುರ್ಘಟನೆಯಿಂದ ಗ್ರಾಮದಲ್ಲಿ ಶೋಕದ ವಾತಾವರಣ ಆವರಿಸಿದೆ.

Leave a Reply

Your email address will not be published. Required fields are marked *