ಪುತ್ತೂರು:ಐಸಿಸಿ ಮ್ಯಾಚ್ ರೆಫರಿ, ಭಾರತ ತಂಡದ ಮಾಜಿ ವೇಗದ ಬೌಲರ್, ಮೈಸೂರು ಎಕ್ಸ್‌ಪ್ರೆಸ್ ಖ್ಯಾತಿಯ ಜಾವಗಲ್ ಶ್ರೀನಾಥ್ ರವರು ಜ.6 ರಂದು ಮಂಜಲ್ಪಡುವಿನ ಪ್ರಾರ್ಥನಾ ಗಾರ್ಡನ್ ಗೆ ಭೇಟಿ ನೀಡಿ ಚಾ ಸವಿಯುತ್ತಿದ್ದ ಸಂದರ್ಭದಲ್ಲಿ ಅಮರ್ ಅಕ್ಟರ್ ಅಂತೋನಿ ಕ್ರಿಕೆಟ್ ಆಯೋಜಕರು ಜಾವಗಲ್ ಶ್ರೀನಾಥ್ ರವರಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದ್ದಾರೆ.
1969, ಆಗಸ್ಟ್ 31 ರಂದು ಜನಿಸಿದ ಜಾವಗಲ್ ಶ್ರೀನಾಥ್ ರವರು ನಿವೃತ್ತ ಕ್ರಿಕೆಟ್ ಆಟಗಾರರಾಗಿದ್ದು, ಭಾರತದ ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

1991ರಲ್ಲಿ ಟೆಸ್ಟ್ ಮತ್ತು ಏಕದಿನ ಪಂದ್ಯಗಳಿಗೆ ಪಾದಾರ್ಪಣೆ ಮಾಡಿದ ಜಾವಗಲ್ ಶ್ರೀನಾಥ್ ರವರು ಕ್ರಿಕೆಟ್ ವೃತ್ತಿಜೀವನದ ಏಕದಿನ ಪಂದ್ಯಗಳಲ್ಲಿ 300 ವಿಕೆಟ್ ಪಡೆದ ಮೊದಲ ಭಾರತೀಯ ವೇಗದ ಬೌಲರ್ ಮತ್ತು ಟೆಸ್ಟ್ ಪಂದ್ಯಗಳಲ್ಲಿ 200 ವಿಕೆಟ್ ಪಡೆದ ಎರಡನೇ ವೇಗದ ಬೌಲರ್ ಎಂಬ ಸಾಧನೆ ಮಾಡಿದ್ದಾರೆ. ಹಾಸನ ಜಿಲ್ಲೆಯ ಜಾವಗಲ್ ಮೂಲದ ಇವರನ್ನು ‘ಮೈಸೂರು ಎಕ್ಸ್‌ಪ್ರೆಸ್’ ಎಂದೂ ಕರೆಯುತ್ತಾರೆ ಮತ್ತು ನಿವೃತ್ತಿಯ ನಂತರ ಐಸಿಸಿ ಮ್ಯಾಚ್ ರೆಫರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕಳೆದ ಹದಿನೈದು ವರ್ಷಗಳಿಂದ ನಿರಂತರವಾಗಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಆಯೋಜಿಸುತ್ತಿರುವ ಆಯೋಜಕರಾದ ರಝಾಕ್ ಬಿ.ಎಚ್ ಬಪ್ಪಳಿಗೆ,ತೌಸಿಫ್ ಬೆಡ್ ಸೆಂಟರ್, ಜಮಾಲ್ ಬಪ್ಪಳಿಗೆರವರು ಜಾವಗಲ್ ಶ್ರೀನಾಥ್ ರವರನ್ನು ಸ್ವಾಗತಿಸಿ, ಪುತ್ತೂರಿನಲ್ಲಿ ನಡೆಸಲಾಗುವ ಅಮರ್ ಅಕ್ಟರ್ ಅಂತೋನಿ ಅಂಡರ್ ಆರ್ಮ್ ಕ್ರಿಕೆಟ್ ಬಗ್ಗೆ ಬೆಳಕು ಚೆಲ್ಲಿದರು. ಪುತ್ತೂರಿನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಆಹ್ವಾನಿಸಿದಾಗ ಬರಬೇಕು ಎಂದು ತಿಳಿಸಿ ಧನ್ಯವಾದ ಸಲ್ಲಿಸಿದರು.









