ಕಡಬ ತಾಲೂಕಿನ 21 ಗ್ರಾಮ ಪಂಚಾಯತ್‌ಗಳ ಅಧಿಕಾರಾವಧಿ 2026ರ ಫೆಬ್ರವರಿಗೆ ಅಂತ್ಯಗೊಳ್ಳಲಿದೆ. ಚುನಾವಣೆ ಘೋಷಣೆಯಾಗದ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿಗಳ ನೇಮಕಕ್ಕೆ ಸರಕಾರ ಮುಂದಾಗಿದ್ದು, ಸಂಪೂರ್ಣ ಮಾಹಿತಿ ಇಲ್ಲಿದೆ.

ಕಡಬ: ತಾಲೂಕಿನ ಗ್ರಾಮ ಪಂಚಾಯತ್‌ಗಳಲ್ಲಿ ಇನ್ನು ಕೆಲವೇ ದಿನಗಳಲ್ಲಿ ಜನಪ್ರತಿನಿಧಿಗಳ ಆಡಳಿತ ಮುಕ್ತಾಯಗೊಂಡು ಆಡಳಿತಾಧಿಕಾರಿಗಳ ಪರ್ವ ಆರಂಭವಾಗಲಿದೆ. ಕಡಬ ತಾಲೂಕಿನ ಒಟ್ಟು 21 ಗ್ರಾಮ ಪಂಚಾಯತ್‌ಗಳ ಚುನಾಯಿತ ಸದಸ್ಯರ ಅಧಿಕಾರಾವಧಿಯು ಮುಂದಿನ ಫೆಬ್ರವರಿ ತಿಂಗಳಿಗೆ ಕೊನೆಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಸರಕಾರ ಆಡಳಿತಾಧಿಕಾರಿಗಳ ನೇಮಕಕ್ಕೆ ಪ್ರಕ್ರಿಯೆ ಆರಂಭಿಸಿದೆ.

ರಾಜ್ಯದ ಸುಮಾರು 5,900 ಗ್ರಾಮ ಪಂಚಾಯತ್‌ಗಳಿಗೆ ಚುನಾವಣೆ ನಡೆದು 5 ವರ್ಷ ಪೂರ್ಣಗೊಳ್ಳುತ್ತಿದೆ. 2020ರ ಡಿಸೆಂಬರ್ 27ರಂದು ಈ ಪಂಚಾಯತ್‌ಗಳಿಗೆ ಸಾರ್ವತ್ರಿಕ ಚುನಾವಣೆ ನಡೆದಿತ್ತು ಮತ್ತು 2021ರ ಫೆಬ್ರವರಿಯಲ್ಲಿ ಹೊಸ ಆಡಳಿತ ಮಂಡಳಿಗಳು ಅಸ್ತಿತ್ವಕ್ಕೆ ಬಂದಿದ್ದವು. ನಿಯಮದಂತೆ ಪ್ರಥಮ ಸಭೆ ನಡೆದ ದಿನಾಂಕದಿಂದ 5 ವರ್ಷಗಳ ಕಾಲ ಸದಸ್ಯರ ಅವಧಿ ಇರುತ್ತದೆ. ಅದರಂತೆ 2026ರ ಫೆಬ್ರವರಿ ತಿಂಗಳ ವಿವಿಧ ದಿನಾಂಕಗಳಲ್ಲಿ ಈ ಅವಧಿಯು ಮುಕ್ತಾಯಗೊಳ್ಳಲಿದೆ.

ಕಡಬ ತಾಲೂಕು ವ್ಯಾಪ್ತಿಯ ಗೋಳಿತ್ತೊಟ್ಟು, ನೆಲ್ಯಾಡಿ, ಕೌಕ್ರಾಡಿ, ನೂಜಿಬಾಳ್ತಿಲ, ಶಿರಾಡಿ, ಕೊಂಬಾರು, ಬಿಳಿನೆಲೆ, ಐತ್ತೂರು, ಕೊಣಾಜೆ, ಮರ್ದಾಳ, ಕುಟ್ರುಪ್ಪಾಡಿ, ಪೆರಾಬೆ, ರಾಮಕುಂಜ, ಕೊಯಿಲ, ಆಲಂಕಾರು, ಸವಣೂರು, ಬೆಳಂದೂರು, ಕಾಣಿಯೂರು, ಎಡಮಂಗಲ, ಬಳ್ಪ ಹಾಗೂ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ಗಳ ಆಡಳಿತ ಮಂಡಳಿಯ ಅವಧಿ ಮುಕ್ತಾಯಗೊಳ್ಳಲಿದೆ

ಗ್ರಾಮ ಪಂಚಾಯತ್‌ಗಳಿಗೆ ಇನ್ನೂ ಹೊಸದಾಗಿ ಚುನಾವಣೆ ಘೋಷಣೆಯಾಗದ ಕಾರಣ, ಅಧಿಕಾರಾವಧಿ ಮುಗಿದ ತಕ್ಷಣ ಆಡಳಿತದಲ್ಲಿ ವ್ಯತ್ಯಯ ಉಂಟಾಗದಂತೆ ತಡೆಯಲು ಸರಕಾರ ಈ ಕ್ರಮಕ್ಕೆ ಮುಂದಾಗಿದೆ. ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬರುವವರೆಗೆ ಸರಕಾರಿ ಅಧಿಕಾರಿಗಳೇ ಪಂಚಾಯತ್ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ. 2ನೇ ಅವಧಿಗೆ ಆಯ್ಕೆಯಾದ ಅಧ್ಯಕ್ಷ-ಉಪಾಧ್ಯಕ್ಷರ ಅಧಿಕಾರವೂ ಇದರೊಂದಿಗೆ ಅಂತ್ಯವಾಗಲಿದೆ.

Leave a Reply

Your email address will not be published. Required fields are marked *