ಸುಬ್ರಹ್ಮಣ್ಯ: ಮಾಜಿ ಪ್ರಧಾನಮಂತ್ರಿ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಹೆಚ್.ಡಿ. ದೇವೇಗೌಡ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದರು. ಭಾನುವಾರ ಸಂಜೆ ಕ್ಷೇತ್ರಕ್ಕೆ ಆಗಮಿಸಿದ ಅವರು ಇಂದು (ಮಾರ್ಚ್ 2) ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಹೆಲಿಕಾಪ್ಟರ್ ಮೂಲಕ ಆಗಮನ;
ಮಾರ್ಚ್ 1ರಂದು ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ ದೇವೇಗೌಡರು, ಕಡಬ ತಾಲೂಕಿನ ಬಿಳಿನೆಲೆ ಯಲ್ಲಿ ಹೆಲಿಪ್ಯಾಡ್‌ನಲ್ಲಿ ಭೂಸ್ಪರ್ಶ ಮಾಡಿದರು. ಅಲ್ಲಿಂದ ರಸ್ತೆ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿದರು. ಸಂಜೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದೇವಳದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.



ಇಂದು ಆಶ್ಲೇಷ ಬಲಿ ಪೂಜೆ;
ಪ್ರವಾಸದ ಪ್ರಮುಖ ಭಾಗವಾಗಿ ಇಂದು ಬೆಳಗ್ಗೆ ಕುಕ್ಕೆ ಕ್ಷೇತ್ರದಲ್ಲಿ ಅತ್ಯಂತ ಫಲಪ್ರದ ಪೂಜೆ ಎಂದು ನಂಬಲಾಗುವ ಆಶ್ಲೇಷ ಬಲಿ ಪೂಜೆಯನ್ನು ದೇವೇಗೌಡರು ನೆರವೇರಿಸಿದರು. ಕುಟಂಬದ ಶ್ರೇಯೋಭಿವೃದ್ಧಿಗಾಗಿ ಈ ವಿಶೇಷ ಸೇವೆಯನ್ನು ಅರ್ಪಿಸಿದ್ದಾರೆ ಎನ್ನಲಾಗಿದೆ.


ಮಧ್ಯಾಹ್ನ 2:30ಕ್ಕೆ ರಸ್ತೆ ಮಾರ್ಗವಾಗಿ ಬಿಳಿನೆಲೆ ಹೆಲಿಪ್ಯಾಡ್‌ಗೆ ಪ್ರಯಾಣ ಬೆಳೆಸಿ, ಮಧ್ಯಾಹ್ನ 3:00ಕ್ಕೆ ಹೆಲಿಕಾಪ್ಟರ್ ಮೂಲಕ ಬೆಂಗಳೂರಿಗೆ ತೆರಲರಿದ್ದಾರೆ.
ಮಾಜಿ ಪ್ರಧಾನಿಗಳಿಗೆ ಇರುವ Z+ ಭದ್ರತೆ ಹಿನ್ನಲೆಯಲ್ಲಿ ಸುಬ್ರಹ್ಮಣ್ಯ ಹಾಗೂ ಬಿಳಿನೆಲೆ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರವಾಸದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಿಶೇಷ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿತ್ತು.
ಈ ಸಂದರ್ಭದಲ್ಲಿ ಜೇಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಸೇರಿದಂತೆ ಸುಬ್ರಹ್ಮಣ್ಯ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂದಿ ಮತ್ತು ಇತರೆ ಗಣ್ಯರು ಉಪಸ್ಥಿತರಿದ್ದರು.

