ಸುಳ್ಯ:
ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ತಾರತಮ್ಯ ಉಂಟಾಗಿರುವುದನ್ನು ಖಂಡಿಸಿ ಮಲೆನಾಡು ಜನ ಹಿತರಕ್ಷಣಾ ವೇದಿಕೆ ವತಿಯಿಂದ ಡಿಸೆಂಬರ್ 24ರಂದು ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆಯ ಪ್ರಮುಖ ಡಿ.ಕೆ. ಅವಿನಾಶ್ ತಿಳಿಸಿದ್ದಾರೆ.

ಅವರು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತ ರೈತರ ರಾಷ್ಟ್ರವಾಗಿದ್ದು ಕೃಷಿಯೇ ದೇಶದ ಬೆನ್ನೆಲುಬು. ಆದರೆ ಇತ್ತೀಚಿನ ದಿನಗಳಲ್ಲಿ ರೈತರ ಸಮಸ್ಯೆಗಳನ್ನು ಆಲಿಸುವವರೇ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು. ರೈತರು ಬೆಳೆ ವಿಮೆ ಕಂತುಗಳನ್ನು ನಿಯಮಿತವಾಗಿ ಪಾವತಿಸಿದ್ದರೂ ಸಹ, ಪರಿಹಾರದ ಮೊತ್ತವನ್ನು ಸರಿಯಾದ ರೀತಿಯಲ್ಲಿ ಜಮೆ ಮಾಡಲಾಗಿಲ್ಲ ಎಂದು ಆರೋಪಿಸಿದರು.

ಕೆಲವು ರೈತರಿಗೆ ಕಡಿಮೆ ಮೊತ್ತ ಮಾತ್ರ ಪಾವತಿಯಾಗುತ್ತಿರುವುದಕ್ಕೆ ಏನು ಕಾರಣ ಎಂಬುದನ್ನು ಸಂಬಂಧಪಟ್ಟ ಇಲಾಖೆ ಸ್ಪಷ್ಟಪಡಿಸಬೇಕು ಹಾಗೂ ನ್ಯಾಯಯುತವಾದ ಬೆಳೆ ವಿಮೆ ಪರಿಹಾರದ ಮೊತ್ತವನ್ನು ರೈತರ ಖಾತೆಗಳಿಗೆ ತಕ್ಷಣ ಜಮೆ ಮಾಡಬೇಕು ಎಂದು ಅವರು ಆಗ್ರಹಿಸಿದರು.

ಈ ಹಿನ್ನೆಲೆಯಲ್ಲಿ ವೇದಿಕೆಯ ಸಂಚಾಲಕ ಕಿಶೋರ್ ಶೀರಾಡಿ ಅವರ ನೇತೃತ್ವದಲ್ಲಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ರೈತರ ಹಿತಾಸಕ್ತಿಗಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪ್ರಮುಖರಾದ ಎ.ಜಿ. ಕರುಣಾಕರ, ಜಯರಾಮ ಭಾರದ್ವಾಜ್, ಸೋಮನಾಥ ಪೂಜಾರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *