ಕಡಬ :
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ನೇತ್ರಾವತಿ ತುಳು ಕೂಟ ರಾಮಕುಂಜ ಹಾಗೂ ನೂಜಿಬಾಳ್ತಿಲ ತೆಗ್ ತುಳು ಕೂಟದ ಆಶ್ರಯದಲ್ಲಿ ಕಡಬ ತಾಲೂಕು ಪ್ರಥಮ ತುಳು ಸಮ್ಮೇಳನವು ಡಿಸೆಂಬರ್ 20 ಮತ್ತು 21ರಂದು ಕೇಪು ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಶಿವರಾಮ ಶೆಟ್ಟಿ ಕೇಪು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನಾಧ್ಯಕ್ಷರಾಗಿ ಕೆ. ಸೇಸಪ್ಪ ರೈ ರಾಮಕುಂಜ ಅವರನ್ನು ಆಯ್ಕೆ ಮಾಡಲಾಗಿದೆ. ತುಳು ಭಾಷೆಯ ಬೆಳವಣಿಗೆಗಾಗಿ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕೆಂಬ ಹಕ್ಕೊತ್ತಾಯವನ್ನು ಮುಂದಿಟ್ಟು ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.




ತುಳುನಾಡಿನಲ್ಲಿ ಹಾಸುಹೊಕ್ಕಾಗಿರುವ ಆಚರಣೆಗಳು, ಹಾಡು, ಕುಣಿತ, ಭಜನೆ ಮುಂತಾದ ಸ್ಪರ್ಧೆಗಳು ಕಾಣಿಯೂರು, ನೂಜಿಬಾಳ್ತಿಲ, ರಾಮಕುಂಜ ಮತ್ತು ಸವಣೂರು ಭಾಗಗಳಲ್ಲಿ ನಡೆಯಲಿದ್ದು, ಡಿ. 20ರಂದು ಸಮ್ಮೇಳನದ ಕಾರ್ಯಕ್ರಮಗಳಿಗೆ ಅಧಿಕೃತ ಚಾಲನೆ ದೊರೆಯಲಿದೆ. ಅದೇ ದಿನ ಸಂಜೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಬಳಿಯಿಂದ ಮೆರವಣಿಗೆ ಹೊರಟು ಕೇಪು ದೇವಸ್ಥಾನದಲ್ಲಿ ಸಮಾಪನಗೊಳ್ಳಲಿದೆ. ಕಡಬ ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮನ್ನಾ ಜಬಿನ್ ಮೆರವಣಿಗೆಯನ್ನು ಉದ್ಘಾಟಿಸಲಿದ್ದು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಂದ್ರಶೇಖರ ಕರ್ಕೇರ ಪುಷ್ಪಾರ್ಚನೆ ನೆರವೇರಿಸಲಿದ್ದಾರೆ.
ಡಿ. 21ರಂದು ಬೆಳಗ್ಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಧ್ವಜಾರೋಹಣ, ಶಾಸಕಿ ಭಾಗೀರಥಿ ಮುರುಳ್ಳ ನಾಡ ಧ್ವಜಾರೋಹಣ ಹಾಗೂ ಸಮ್ಮೇಳನಾಧ್ಯಕ್ಷ ಕೆ. ಸೇಸಪ್ಪ ರೈ ತುಳು ಧ್ವಜಾರೋಹಣ ನೆರವೇರಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಸುಬ್ರಹ್ಮಣ್ಯ ಸಂಪುಟ ನರಸಿಂಹ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.


ಆಳ್ವಾಸ್ ವಿದ್ಯಾ ಸಂಸ್ಥೆಯ ಡಾ. ಮೋಹನ್ ಆಳ್ವ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ಅಶೋಕ್ ಕುಮಾರ್ ರೈ, ಕಿಶೋರ್ ಕುಮಾರ್ ಬೊಟ್ಯಾಡಿ, ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ. ಸೀತಾರಾಮ ರೈ ಸವಣೂರು ಸೇರಿದಂತೆ ಅನೇಕ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವಸ್ತು ಪ್ರದರ್ಶನ ಮತ್ತು ವಿಚಾರಗೋಷ್ಠಿಗಳು: ತುಳುನಾಡಿನ ದಿನಬಳಕೆಯ ಹಳೆಯ ವಸ್ತುಗಳ ಪ್ರದರ್ಶನ ನಡೆಯಲಿದೆ. ಶಾಲೆಗಳಲ್ಲಿ ತುಳು ಕಲಿಕೆಗೆ ಸಮ್ಮೇಳನದ ಪಾತ್ರ, ತುಳು ಬೆಳವಣಿಗೆಯಲ್ಲಿ ಸಂಘ–ಸಂಸ್ಥೆಗಳ ಪಾತ್ರ, ತುಳು ಕಲಿಸುವ ಶಾಲೆಗಳ ಸಂಖ್ಯೆಯನ್ನು ಹೇಗೆ ಹೆಚ್ಚಿಸಬಹುದು ಎಂಬ ವಿಷಯಗಳ ಕುರಿತು ವಿಚಾರಗೋಷ್ಠಿಗಳು ನಡೆಯಲಿವೆ. ಸರಿತಾ ಜನಾರ್ದನ್ ಅವರ ಪುಸ್ತಕ ಬಿಡುಗಡೆ, ಕವಿತೆ ಮತ್ತು ಕಥಾಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆಯಲಿವೆ.
ಸಮಾರೋಪ ಸಮಾರಂಭದಲ್ಲಿ ಪುತ್ತೂರು ಧರ್ಮ ಪ್ರಾಂತದ ಧರ್ಮಾಧ್ಯಕ್ಷ ಡಾ. ಗೀವರ್ಗೀಸ್ ಮಾರ್ ಮಕಾರಿಯೋಸ್ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ದುರ್ಗಾಪ್ರಸಾದ್ ರೈ ಕುಂಬ್ರ ಸಮಾರೋಪ ಭಾಷಣ ಮಾಡಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಕಾರ್ಯದರ್ಶಿ ಸರಿತಾ ಜನಾರ್ದನ್, ಸಮಿತಿ ಸಂಚಾಲಕ ಉಮೇಶ್ ಶೆಟ್ಟಿ ಸಾಯಿರಾಂ, ಪ್ರಧಾನ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ. ಹಾಗೂ ಜತೆ ಕಾರ್ಯದರ್ಶಿ ಪ್ರೇಮಾ ಉಪಸ್ಥಿತರಿದ್ದರು.


