ರಸ್ತೆ ಸಂಪರ್ಕ ಇದೆ ಎನ್ನುವ ವಾದ vs ಖಾಸಗಿ ಜಾಗದ ಮೂಲಕ ರಸ್ತೆ ಬೇಡಿಕೆ; ಪ್ರಕರಣ ಕೋರ್ಟ್ ಮೆಟ್ಟಿಲಲ್ಲಿ

ಪುತ್ತೂರು: ಮುಂಡೂರು ಬರೆಕೋಲಾಡಿ ಪ್ರದೇಶದ ರಸ್ತೆ ಸಮಸ್ಯೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಸುಮಾರು 15 ಮನೆಗಳಿಗೆ ರಸ್ತೆ ಸಂಪರ್ಕವಿಲ್ಲ ಎಂದು ಪ್ರತಿಭಟನೆಗಳು ನಡೆದಿದ್ದರೆ, ಇದೀಗ ಜಮೀನು ಮಾಲೀಕ ಸಂದೀಪ್ ಆ ಆರೋಪವನ್ನು ತಳ್ಳಿ ಹಾಕಿದ್ದಾರೆ.

ಅವರ ಪ್ರಕಾರ, ಆ ಪ್ರದೇಶದಲ್ಲಿ 15 ಮನೆಗಳೇ ಇಲ್ಲ, ಕೇವಲ ನಾಲ್ಕು ಮನೆಗಳಿದ್ದು, ಅವರಿಗೆ ಬೇರೆ ಮಾರ್ಗದಿಂದಲೇ ರಸ್ತೆ ಸಂಪರ್ಕವಿದೆ. ಆದರೂ ಕೆಲವರು ಖಾಸಗಿ ಜಮೀನಿನ ಮೂಲಕವೇ ರಸ್ತೆ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಈ ಸಂಬಂಧ ಪ್ರಕರಣ ಈಗ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದು, ಸತ್ಯಾಂಶವನ್ನು ಕೋರ್ಟ್ ಹೊರತರುತ್ತದೆ ಎಂದು ಸಂದೀಪ್ ತಿಳಿಸಿದ್ದಾರೆ. “ರಸ್ತೆ ನಿರ್ಮಾಣಕ್ಕೆ ವಿರೋಧವಿಲ್ಲ, ಆದರೆ ನಮ್ಮ ಖಾಸಗಿ ಜಾಗದಲ್ಲೇ ಮಾಡಬೇಕು ಎನ್ನುವುದು ಸರಿಯಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇನ್ನೊಂದೆಡೆ, ಸ್ಥಳೀಯ ಕಾಂಗ್ರೆಸ್ ಮುಖಂಡ ಪ್ರವೀಣ್ ಆಚಾರ್ಯ ಮಾತನಾಡಿ, “ಇಲ್ಲಿನ ರಸ್ತೆ ಸಮಸ್ಯೆ ಬಹುಕಾಲದಿಂದ ವಿವಾದದಲ್ಲಿದೆ. ನಾಲ್ಕು ಮನೆಗಳಿಗೆ ಈಗಾಗಲೇ ಬೇರೆ ಭಾಗದಿಂದ ರಸ್ತೆ ಇದೆ. ಶಾಸಕರ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಯೋಜನೆ ಇತ್ತು, ಆದರೆ ಅದನ್ನೇ ಕೆಲವರು ವಿರೋಧಿಸಿ ಅನುದಾನವನ್ನು ಬೇರೆಡೆಗೆ ತಿರುಗಿಸಿದ್ದಾರೆ” ಎಂದು ಹೇಳಿದ್ದಾರೆ.
ಈ ನಡುವೆ, ಹೊರಗಿನವರನ್ನು ಕರೆಸಿ ಪ್ರತಿಭಟನೆ ನಡೆಸುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ರಸ್ತೆ ಸಮಸ್ಯೆಗೆ ಸ್ಥಳೀಯ ನಾಯಕರು ಮುಂದಾಗಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂಬ ಮಾತು ಕೇಳಿಬರುತ್ತಿದೆ.

Leave a Reply

Your email address will not be published. Required fields are marked *