ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತಿಚೇಗೆ ಮೇಲಿಂದ ಮೇಲೆ ಆಫ್ರಿಕಾದಲ್ಲಿರುವ ಕ್ರಿಶ್ಚಿಯನ್ನರು ಹಾಗೂ ಬಿಳಿ ರೈತರನ್ನು ಆಫ್ರಿಕರನ್ನರು ಉದ್ದೇಶ ಪೂರ್ವಕವಾಗಿ ಕೊಲ್ಲುತ್ತಿದ್ದಾರೆ ಎಂದು ಆರೋಪಿಸುತ್ತಲೇ ಇದ್ದಾರೆ. ಇದೇ, ಬೆನ್ನಲ್ಲೇ ಈ ವರ್ಷ ನ. 22-23ರಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ G-20 ಶೃಂಗಸಭೆಯಲ್ಲಿ ಟ್ರಂಪ್ ಆಗಲಿ ಅಥವಾ ಅಮೆರಿಕದ ಯಾವುದೇ ಅಧಿಕಾರಿ ಭಾಗವಹಿಸುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

ಈ ಮೊದಲು ಇದೇ ವಾರದ ಆರಂಭದಲ್ಲಿ ಮಿಯಾಮಿಯ ನೀಡಿದ ಭಾಷಣದ ಸಂದರ್ಭದಲ್ಲಿ, ಟ್ರಂಪ್ ದಕ್ಷಿಣ ಆಫ್ರಿಕಾವನ್ನು ಗ್ರೂಪ್ ಆಫ್ 20 ರಿಂದ ಹೊರಹಾಕಬೇಕು ಎಂದು ಹೇಳಿದ್ದರು. ಅಲ್ಲದೆ, ಇದೇ ಕಾರಣ ನೀಡಿ ತಾನು G-20 ಶೃಂಗಸಭೆಯಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಹೇಳಿದ್ದರು. ಆಗ ಟ್ರಂಪ್ ಬದಲಿಗೆ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾಗವಹಿಸಲಿದ್ದಾರೆ ಎಂದು ವರದಿಯಾಗಿತ್ತು. ಆದರೆ ಶುಕ್ರವಾರ ತನ್ನ ಟ್ರೂತ್ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಈ ವರದಿಗಳಿಗೆ ಬ್ರೇಕ್ ಹಾಕಿದ್ದು, ಅಮೆರಿಕದ ಯಾವುದೇ ಅಧಿಕಾರಿ ದ.ಆಫ್ರಿಕಾಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


