ಕಡಬ : ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಜ್ಯೂಸ್ ಅಂಗಡಿ ಸಮೀಪ ಅಸ್ವಸ್ಥಗೊಂಡಿದ್ದ ಅಪರಿಚಿತ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ವಿನೇಶ್ ಕುಮಾರ್ ಯು.ಎಸ್. ಅವರು ನೀಡಿದ ದೂರಿನ ಪ್ರಕಾರ, ಕಳೆದ ಮೂರು ದಿನಗಳಿಂದ ಜ್ಯೂಸ್ ಅಂಗಡಿ ಬಳಿ ಅಸ್ವಸ್ಥ ಸ್ಥಿತಿಯಲ್ಲಿ ಮಲಗಿದ್ದ ವ್ಯಕ್ತಿಯನ್ನು ವಿಚಾರಿಸಿದಾಗ, ಆತ ತನ್ನ ಹೆಸರನ್ನು “ರಂಜಿತ್, ಕೊಲ್ಕತ್ತಾ” ಎಂದು ಮಾತ್ರ ತಿಳಿಸಿದ್ದಾನೆ.





ಮಾರ್ಚ್ 6ರಂದು ರಾತ್ರಿ ಸುಮಾರು 1.20 ಗಂಟೆಗೆ, ವ್ಯಕ್ತಿಯ ಆರೋಗ್ಯ ಹದಗೆಟ್ಟ ಹಿನ್ನೆಲೆ 112ಕ್ಕೆ ಕರೆ ಮಾಡಲಾಗಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಿಳಿನೆಲೆ ಪಿಡಿಒ ಚಂದ್ರಾವತಿ ಅವರ ಸಮ್ಮುಖದಲ್ಲಿ 108 ಆಂಬುಲೆನ್ಸ್ ಮೂಲಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 9ರಂದು ಬೆಳಿಗ್ಗೆ ಸುಮಾರು 11 ಗಂಟೆಗೆ ವ್ಯಕ್ತಿ ಮೃತಪಟ್ಟಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ, ಮೃತ ವ್ಯಕ್ತಿ ಅನಾರೋಗ್ಯ ಅಥವಾ ಆಹಾರಾಭಾವದಿಂದ ನಿತ್ರಾಣಗೊಂಡು ಸಾವನ್ನಪ್ಪಿರುವ ಸಾಧ್ಯತೆ ಇದ್ದು, ಸಾವಿನಲ್ಲಿ ಯಾವುದೇ ಅನುಮಾನಾಸ್ಪದ ಲಕ್ಷಣಗಳು ಕಂಡುಬಂದಿಲ್ಲ ಎಂದು ತಿಳಿದುಬಂದಿದೆ.




ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
👉 ಸುಮಾರು 42 ವರ್ಷ ಪ್ರಾಯದ ಈ ಅಪರಿಚಿತ ವ್ಯಕ್ತಿಯ ಗುರುತು ಪತ್ತೆಗೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
