ಕಡಬ ತಾಲೂಕಿನ ಪೆರಾಬೆ ಗ್ರಾಮದ ಉರುಂಬಿ ಎಂಬಲ್ಲಿ ಕುಮಾರಧಾರ ನದಿಗೆ ನಿರ್ಮಿಸಲು ಉದ್ಧೇಶಿಸಿರುವ ೨೪ ಮೇಗಾ ವ್ಯಾಟ್ ಸಾಮರ್ಥ್ಯದ ಕಿರು ಜಲ ವಿದ್ಯುತ್ ಕುಕ್ಕೇ ಹೈಡಲ್ ಯೋಜನೆಗೆ ಸರಕಾರ ತಡೆ ನೀಡಿದೆ ಇದು ನಮ್ಮ ಎರಡು ದಶಕಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಕುಮಾರಧಾರ ಪರಿಸರ ಸಂರಕ್ಷಣಾ ಸಮಿತಿ ಅಧ್ಯಕ್ಷ ಎನ್,ಕರುಣಾಕರ ಗೋಗಟೆ ಹರ್ಷ ವ್ಯಕ್ತಪಡಿಸಿದರು.

ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಲ್ಲಿ ಮಾತನಾಡಿ ಕಳೆದ ೨೦ ವಷÀðಗಳಿಂದ ನಾವು ಯಾವುದೇ ಒತ್ತಡಕ್ಕೆ, ಆಶೆ, ಆಮಿಶಗಳಿಗೆ ಮಣಿಯದೆ ಪ್ರಮಾಣಿಕ ಹೋರಾಟ ಮಾಡಿದರ ಪರಿಣಾಮವಾಗಿ ಗೆಲುವು ನಮ್ಮ ಪಾಲಿಗಾಗಿದೆ, ಈ ಸಂಬAಧ ಎಪ್ರಿಲ್ ೬ ನೇ ಸೋಮವಾರ ಉರುಂಬಿಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭೆ ಆಯೋಜಿಸಲಾಗಿದೆ ಎಂದರು.
ಕಳೆದ ಮೂರು ದಶಕಗಳಿಂದಲೂ ಕುಮಾರಧಾರ ನದಿಗೆ ವಿವಿಧ ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳು ಅನುಷ್ಟಾನವಾಗುವ ಭೀತಿಯನ್ನು ಈ ಭಾಗದ ಜನ ಎದುರಿಸುತ್ತಾ ಬಂದಿದ್ದಾರೆ. ಸರಕಾರ ೨೦೦೫ ರಲ್ಲಿ ಉರುಂಬಿಯಲ್ಲಿ ಯೋಜನೆಗೆ ಅಲಾಟ್‌ಮೆಂಟ್ ನೀಡಿತ್ತು. ೨೦೧೧ರಲ್ಲಿ ಒಂದು ಖಾಸಗಿ ಸಂಸ್ಥೆ ಉರುಂಬಿಯಲ್ಲಿ ನದಿಗೆ ೨೪ ಮೆಗಾವಾಟ್ ಸಾಮರ್ಥ್ಯದ ಜಲವಿದ್ಯುತ್ ಯೋಜನೆಯನ್ನು ಪ್ರಸ್ತಾಪಿಸಿತ್ತು. ಈ ಯೋಜನೆಯ ಹಿನ್ನೀರಿನ ವಿಸ್ತರಣೆ ಕುಮಾರಧಾರ ಹಾಗೂ ಅದರ ಉಪನದಿ ಗುಂಡ್ಯ ನದಿಗಳ ತೀರ ಪ್ರದೇಶಗಳಿಗೂ ಹರಡಲಿದ್ದು, ಈ ಭಾಗದ ವ್ಯಾಪಕ ಕೃಷಿ ಮತ್ತು ಅರಣ್ಯ ಭೂಮಿ ಮುಳುಗಡೆಯಾಗುವ ಸಾಧ್ಯತೆ, ಸಾವಿರಾರು ಜನರ ಸ್ಥಳಾಂತರ ಮತ್ತು ಮಳೆಗಾಲದಲ್ಲಿ ಭೀಕರ ಪ್ರವಾಹದ ಅಪಾಯಗಳ ಬಗ್ಗೆ ಆತಂಕ ಉಂಟುಮಾಡಿತ್ತು

ಇದನ್ನು ವಿರೋಧಿಸಿ ಯೋಜನೆಯನ್ನು ವಿರುದ್ಧ ಹೋರಾಟ ಮಾಡುವ ಉದ್ಧೇಶದಿಂದ ನನ್ನ ನೇತೃತ್ವದಲ್ಲಿ ಕುಮಾರಧಾರ ಸಂರಕ್ಷಣಾ ಸಮಿತಿಯ ರಚನೆಯಾಗಿತ್ತು. ರೈತರನ್ನು ಒಗ್ಗೂಡಿಸಿಕೊಂಡು ಅಂದಿನಿAದ ಇಂದಿನ ತನಕವೂ ನಾನಾ ರೀತಿಯಲ್ಲಿ ಹೋರಟಗಳನ್ನು ಮಾಡಿಕೊಂಡು ಬರಲಾಗಿತ್ತು. ಹೋರಾಟದಲ್ಲಿ ಜಾಥಾಗಳು, ಬೈಕ್ ರ‍್ಯಾಲಿಗಳು, ಕಾರ್ಯಾಗಾರಗಳು, ಬೀದಿ ನಾಟಕಗಳು, ಪ್ರತಿಭಟನೆಗಳು, ಕಾನೂನು ಹೋರಾಟಗಳು ಹಾಗೂ ಆಡಳಿತ ಸಂಸ್ಥೆಗಳಿಗೆ ಮನವಿ ಸಲ್ಲಿಕೆಗಳು ನಡೆದಿದ್ದವು. ಪ್ರತಿ ವರ್ಷ ಕುಮಾರಧಾರ ನದಿ ತೀರದಲ್ಲಿ ರೈತರು ಸತ್ಯನಾರಾಯಣ ಪೂಜೆ ನಡೆಸುವುದರ ಮೂಲಕ ಆಧ್ಯಾತ್ಮಿಕ ಶಕ್ತಿಯನ್ನೂ ಹೋರಾಟಕ್ಕೆ ಜೋಡಿಸಿಕೊಳ್ಳಲಾಗಿತ್ತು. ಹೋರಟಗಾರರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಒತ್ತಡಗಳನ್ನು ಹೇರಿ, ಆಮಿಷಗಳನ್ನು ಒಡ್ಡಿ ಪ್ರತಿಭಟನೆಯನ್ನು ಹತ್ತಿಕ್ಕುವ ಷಡ್ಯಂತರಗಳನ್ನು ಮಾಡಲಾಗಿತ್ತು. ಯಾವುದಕ್ಕೂ ಮಣಿಯದೆ ಕೆಚ್ಚೆದೆಯಿಂದ ಮುನ್ನುಗ್ಗಿದ ಪರಿಣಾಮ ನಮಗೆ ಸರಕಾರದ ಕಡೆಯಿಂದ ನ್ಯಾಯ ದೊರಕಿದೆ. ಉರುಂಬಿ ಯೋಜನೆಯೊಂದಿಗೆ ಕುಮಾರಧಾರ ನದಿಗೆ ಅಲ್ಲಲ್ಲಿ ನಿರ್ಮಿಸಲು ಉದ್ಧೇಶಿಸಿರುವ ಕಿರು ಜಲವಿದ್ಯುತ್ ಯೋಜನೆಗಳಿಗೆ ಕೂಡಾ ಸರಕಾರ ತಡೆ ನೀಡಿದೆ. ಶಿರಸಿಯ ಹಿರಿಯ ಪರಿಸರ ತಜ್ಞ ಅನಂತ ಹೆಗಡೆ ಆಶೀಸರ ಸಮಿತಿಗೆ ಮಾರ್ಗದರ್ಶಕರಾಗಿ ಹೋರಾಟದ ದಿಕ್ಕು ನಿರ್ಧರಿಸಲು ಸಹಕರಿಸಿದರು. ಕಾನೂನು ಸಲಹೆಗಾರರಾಗಿ ಹಿರಿಯ ನ್ಯಾಯವಾದಿ ಶ್ರೀನಿವಾಸ್ ಸಹಕರಿಸಿದ್ದರು. ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮತ್ತು ಅವರ ತಂಡ ನೀಡಿದ ವೈಜ್ಞಾನಿಕ ವರದಿ ಕುಮಾರಧಾರ ಪ್ರದೇಶವನ್ನು ಜೀವ ವೈವಿಧ್ಯತೆಯ ಹಾಟ್‌ಸ್ಪಾಟ್ ಎಂದು ಗುರುತಿಸಿದ್ದರು ಇದು ರಾಜ್ಯ ಸರ್ಕಾರವು ಯೋಜನೆಯನ್ನು ರದ್ದುಗೊಳಿಸಲು ಪ್ರಮುಖ ಕಾರಣವಾಯಿತು ಎಂದು ವಿವರಿಸಿದ ಕರುಣಾಕರ ಗೋಗಟೆ ಎಪ್ರಿಲ್ ೬ ರಂದು ನಡೆಯುವ ಶ್ರೀ ಸತ್ಯನರಾಯಣ ಪೂಜಾ , ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠಾಧೀಶ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಪಶ್ಚಿಮಘಟ್ಟ ಜೀವ ವೈವಿಧ್ಯತಾ ಕಾರ್ಯಪಡೆಯ ಮಾಜಿ ಅಧ್ಯಕ್ಷ ಪರಿಸರ ತಜ್ಞ ಅನಂತ ಹೆಗಡೆ ಆಶೀಸರ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಹಿರಿಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೋರಾಟದೊಂದಿಗೆ ಕೈಜೋಡಿಸದವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಉಪಾಧ್ಯಕ್ಷ ಗೋಪಾಲಕೃಷ್ಣ ಇಡ್ಯಡ್ಕ, ಕಾರ್ಯದರ್ಶಿ ಕಿರಣ್ ಗೋಗಟೆ, ಜತೆ ಕಾರ್ಯದರ್ಶಿ ಎಲ್ಸಿ ತೋಮಸ್, ಸದಸ್ಯ ಮೋನಪ್ಪ ಗೌಡ ನಾಡೋಳಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *