ಯುದ್ಧ ಪರಿಸ್ಥಿತಿಯಲ್ಲೂ ದೇಶದಲ್ಲಿ ಗ್ಯಾಸ್ ಸಂಕಷ್ಟ ಇಲ್ಲ; ಹೆಚ್ಚುವರಿ ಸಂಗ್ರಹಣೆ ಮಾಡಬೇಡಿ ಎಂದು ಮನವಿ

ಪುತ್ತೂರು: ಇರಾನ್, ಅಮೇರಿಕಾ ಮತ್ತು ಇಸ್ರೆಲ್ ನಡುವಣ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಹಾಗೂ ನೈಸರ್ಗಿಕ ಅನಿಲದ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಯಾವುದೇ ಗಂಭೀರ ಸಮಸ್ಯೆ ಉಂಟಾಗದಂತೆ ಕೇಂದ್ರ ಸರ್ಕಾರ ಸಮರ್ಥವಾಗಿ ನಿರ್ವಹಣೆ ಮಾಡುತ್ತಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಅಡುಗೆ ಅನಿಲದ ಕೊರತೆ ಎದುರಾಗುತ್ತಿರುವಾಗಲೂ ಭಾರತದಲ್ಲಿ ಜನರು ನಿರಾಳವಾಗಿ ತಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಪ್ರಧಾನಿ Narendra Modi ಹಾಗೂ ಇಂಧನ ಸಚಿವ Hardeep Singh Puri ಅವರ ದೂರದೃಷ್ಟಿಯೇ ಕಾರಣ ಎಂದು ಹೇಳಿದರು.
ಕೇಂದ್ರ ಸರ್ಕಾರ ರಷ್ಯಾ ಸೇರಿದಂತೆ ವಿವಿಧ ರಾಷ್ಟ್ರಗಳಿಂದ ಕಚ್ಚಾ ತೈಲ ಹಾಗೂ ನೈಸರ್ಗಿಕ ಅನಿಲವನ್ನು ತುರ್ತುವಾಗಿ ಆಮದು ಮಾಡಿಕೊಂಡು, ವಿಶೇಷವಾಗಿ ನವ ಮಂಗಳೂರು ಬಂದರಿನ ಮೂಲಕ ಪೂರೈಕೆ ಹೆಚ್ಚಿಸುವ ಕೆಲಸ ಮಾಡುತ್ತಿದೆ ಎಂದು ವಿವರಿಸಿದರು.
ಇದೇ ವೇಳೆ, ಜನರು ಅನಿಲ ಕೊರತೆ ಭಯದಿಂದ ಹೆಚ್ಚುವರಿ ಸಿಲಿಂಡರ್‌ಗಳನ್ನು ಸಂಗ್ರಹಿಸುವುದು ಅಥವಾ ಕಾಳ ಸಂತೆಯಲ್ಲಿ ಮಾರಾಟ ಮಾಡುವಂತಹ ಕೃತ್ಯಗಳಿಗೆ ಮುಂದಾಗಬಾರದು ಎಂದು ಮನವಿ ಮಾಡಿದರು.

ವಾಣಿಜ್ಯ ಗ್ಯಾಸ್‌ ಕೊರತೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಜಿಲ್ಲೆಯ ಹೋಟೆಲ್ ಮಾಲಕರು ಹಾಗೂ ಬೀದಿ ಬದಿ ವ್ಯಾಪಾರಿಗಳಿಗೆ ಅಗತ್ಯವಾದ ಪೂರೈಕೆ ಮುಂದಿನ ದಿನಗಳಲ್ಲೂ ನಿರಂತರವಾಗಿ ಲಭ್ಯವಾಗಲಿದೆ ಎಂದು ಭರವಸೆ ನೀಡಿದರು.
ಮುಂದೆ ಹಬ್ಬಗಳ ಸೀಸನ್ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಪುತ್ತೂರು ಜಾತ್ರೆ ಸಂದರ್ಭದಲ್ಲೂ ಗ್ಯಾಸ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲಾಗುವುದು. ಪ್ರತಿಯೊಬ್ಬರೂ ದಿನನಿತ್ಯಕ್ಕೆ ಬೇಕಾದಷ್ಟೇ ಗ್ಯಾಸ್ ಬಳಸಿ ಸಹಕಾರ ನೀಡಬೇಕು ಎಂದು ಸಂಜೀವ ಮಠಂದೂರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *