ಪುತ್ತೂರು: ಭಾರತದ ಆತ್ಮವಾದ ಧರ್ಮ ಹಾಗೂ ಸಂಸ್ಕೃತಿಯನ್ನು ಜಗತ್ತಿನಾದ್ಯಂತ ಸಾರಿದ ಮಹಾನುಭಾವ ಸ್ವಾಮಿ ವಿವೇಕಾನಂದರು ಧರ್ಮವನ್ನೇ ತಳಹದಿಯಾಗಿರಿಸಿಕೊಂಡು ಸಮಾಜ ಸುಧಾರಣೆಯ ಮಹತ್ವದ ಕಾರ್ಯ ಮಾಡಿದರು. ಅವರ ಕನಸಿನಂತೆ ಇಂದಿನ ತಲೆಮಾರು ಬದಲಾಗುತ್ತಿದ್ದು, ದೀರ್ಘಕಾಲದ ನಿದ್ದೆಯ ಬಳಿಕ ತಾಯಿ ಭಾರತಿ ಎಚ್ಚೆತ್ತುಕೊಳ್ಳುತ್ತಿದ್ದಾಳೆ.

ಭಾರತ ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಕೀರ್ತಿಯನ್ನು ಜಗತ್ತಿನಾದ್ಯಂತ ಪಸರಿಸುತ್ತಿದೆ ಎಂದು ಹಿಂದೂ ಜಾಗರಣ ವೇದಿಕೆ, ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.
ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ವತಿಯಿಂದ ನೆಹರುನಗರದ ವಿವೇಕಾನಂದ ಕಾಲೇಜು ಆವರಣದಲ್ಲಿ ಜ.12ರಂದು ಆಯೋಜಿಸಲಾದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಭಾರತ ಯಾವತ್ತಿಗೂ ನಾಶವಾಗುವುದಿಲ್ಲ ಎಂಬ ಮೃತ್ಯುಂಜಯ ತತ್ತ್ವವನ್ನು ಜಗತ್ತಿಗೆ ಪರಿಚಯಿಸಿದ ದೇಶ ನಮ್ಮದು. ಸೋಮನಾಥ ಮಂದಿರದ ಅಮರಗಾಥೆ ಇಂದಿಗೂ ನಮ್ಮ ಕಣ್ಣೆದುರಿನಲ್ಲಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೂರು ವರ್ಷ ಪೂರೈಸಿದ್ದು, ವಂದೇ ಮಾತರಂ ಗೀತೆ ನೂರೈವತ್ತು ವರ್ಷಗಳಿಂದ ನಿರಂತರವಾಗಿ ಮೊಳಗುತ್ತಿದ್ದು, ಇದು ಭಾರತದ ಜೀವಂತಿಕೆಗೆ ಸಾಕ್ಷಿಯಾಗಿದೆ ಎಂದು ಅವರು ತಿಳಿಸಿದರು.

ಸ್ವಾತಂತ್ರ್ಯಪೂರ್ವದಲ್ಲಿ ಖುದಿರಾಮ್ ಬೋಸ್, ಪ್ರೀತಿಲತಾ ವಡ್ಡದಾರ್, ಬಿಪಿನ್ ಚಂದ್ರಪಾಲ್ ಮೊದಲಾದ ಕ್ರಾಂತಿಕಾರಿ ವೀರರು ರಾಷ್ಟ್ರದ ಮುಕ್ತಿಗಾಗಿ ತಮ್ಮ ಜೀವವನ್ನು ಅರ್ಪಿಸಿದ್ದಾರೆ. ಈ ಎಲ್ಲರಿಗೂ ಸ್ವಾಮಿ ವಿವೇಕಾನಂದರ ಚಿಂತನೆಗಳು ಪ್ರೇರಣೆಯಾಗಿದ್ದು, ಅವರ ಸಾಹಿತ್ಯ ಭಾರತೀಯರಿಗೆ ಸದಾ ಸ್ಫೂರ್ತಿಯ ಮೂಲವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಮಾತನಾಡಿ, ಜಗತ್ತು ಗೆಲ್ಲಲು ಅನೇಕರು ಪ್ರಯತ್ನಿಸಿದ್ದಾರೆ. ಆದರೆ ಒಂದು ಬಿಂದು ರಕ್ತವನ್ನೂ ನೆಲಕ್ಕೆ ಚೆಲ್ಲದೆ, ರಕ್ತಕ್ಕೆ ರಕ್ತ ಜೋಡಿಸಿದ ಮಹಾನುಭಾವ ಸ್ವಾಮಿ ವಿವೇಕಾನಂದರು. ದೇಶಭಕ್ತಿಯೆಂಬ ವ್ರತದೊಂದಿಗೆ ಭಾರತದ ಆಧ್ಯಾತ್ಮಿಕ ಚಿಂತನೆಗಳನ್ನು ವಿಶ್ವದಾದ್ಯಂತ ಪಸರಿಸಿದರು. ಪ್ರತಿಯೊಬ್ಬ ವ್ಯಕ್ತಿಯೂ ತನ್ನೊಳಗಿನ ಶಕ್ತಿಯನ್ನು ಜಾಗೃತಗೊಳಿಸಿಕೊಳ್ಳಲು ವಿವೇಕಾನಂದರೇ ಆದರ್ಶ ಎಂದು ಹೇಳಿದರು.
ಬ್ರಿಟಿಷರ ಆಡಳಿತದ ವಿರುದ್ಧ ಹೋರಾಡಲು ದೇಶಾದ್ಯಂತ ಸಾವಿರಾರು ಹೋರಾಟಗಾರರು ಹುಟ್ಟಿದರು. ವಂದೇ ಮಾತರಂ ಗೀತೆ ಅವರಿಗೆಲ್ಲ ಪ್ರೇರಣೆಯಾಗಿದ್ದು, ಆ ಹಾಡಿಗೆ ಭಾವ ತುಂಬಿದವರು ಸ್ವಾಮಿ ವಿವೇಕಾನಂದರ ನುಡಿಗಳು. ಅಂದಿನಿಂದ ಇಂದಿನವರೆಗೂ ಸಮಾಜದಲ್ಲಿ ವಿವೇಕಾನಂದರ ತತ್ತ್ವಗಳು ಉಸಿರಾಡುತ್ತಿವೆ ಎಂದು ಅವರು ನುಡಿದರು.
ಈ ಸಂದರ್ಭ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಅಂಗವಾಗಿ ನಗರ ಹಾಗೂ ಗ್ರಾಮಾಂತರ ಶಾಲೆಗಳ ಸುಮಾರು 20 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ವಂದೇ ಮಾತರಂ ಹಾಗೂ ದೇಶಭಕ್ತಿಗೀತೆಗಳ ಸಮೂಹ ಗಾಯನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಛಾಯೆ ನೀಡಿದರು.

ಸಭಾ ಕಾರ್ಯಕ್ರಮದ ಬಳಿಕ ಸಂಘ ಶತಾಬ್ದಿ ಪರಿಕಲ್ಪನೆಯಡಿ ಸಂಘ ಬೆಳೆದು ಬಂದ ಹಾದಿಯನ್ನು ಪ್ರತಿಬಿಂಬಿಸುವಂತೆ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *