ಸುಬ್ರಹ್ಮಣ್ಯ, ಡಿಸೆಂಬರ್ 12:
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದ ಸಣ್ಣ ಹಾಗೂ ಅತಿ ಸಣ್ಣ ರೈತರು ಈ ವರ್ಷ ಎಲೆ ಚುಕ್ಕಿ ರೋಗ, ಕೊಳೆರೋಗ, ಹಳೆದಿರೋಗ ಸೇರಿ ಹಲವಾರು ಬೆಳೆ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆ ನಾಶದಿಂದ ಮಾನಸಿಕವಾಗಿ ಕುಗ್ಗಿರುವ ರೈತರು ದಿವಾಳಿಯ ಅಂಚಿನಲ್ಲಿದ್ದಾರೆ.

ಹಿಂದಿನ ವರ್ಷಗಳಲ್ಲಿ ಬೆಳೆ ವಿಮೆಗೆ ಪಾವತಿಸಿದ ಮೊತ್ತಕ್ಕೆ ಸರಿಯಾದ ವಿಮಾ ಪರಿಹಾರ ಲಭಿಸುತಿದ್ದರೂ, ಈ ವರ್ಷ ಬೆಳೆ ವಿಮೆ ಪಾವತಿಯಾದರೂ ಪರಿಹಾರ ಹಣ ಬರದೆ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಕೃಷಿ ಸಾಲ ಮಾಡಿರುವ ಹಲವು ರೈತರು ವಿಮಾ ಪರಿಹಾರ ನಿರೀಕ್ಷೆಯಲ್ಲಿದ್ದು, ಸಾಲ ಮರುಪಾವತಿಗೂ ಸಂಕಷ್ಟ ಎದುರಿಸಿದ್ದಾರೆ.



“ರೈತರು ಕಷ್ಟಪಟ್ಟು ಗಳಿಸಿದ ಹಣದಿಂದ ವಿಮೆ ಕಟ್ಟಿದ್ದಾರೆ. ಆದರೆ ಈಗ ವಿಮಾ ಪರಿಹಾರವಿಲ್ಲದೇ ಕಂಗಾಲಾಗಿದ್ದಾರೆ. ಸರಕಾರವು ಕೂಡಲೇ ಸರಿಯಾದ ಪರಿಹಾರ ಪಾವತಿಸಬೇಕು. ವಿಳಂಬವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು,” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಸಂಚಾಲಕ ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದರು.
ಒಂದು ಅಥವಾ ಎರಡು ಎಕರೆ ಭೂಮಿ ಹೊಂದಿರುವ ಸಣ್ಣ ರೈತರಿಗೆ ಕೆಲವೆಡೆ ಕೇವಲ 200 ರೂ., 500 ರೂ. ವಿಮಾ ಪರಿಹಾರ ಬಂದಿರುವ ಉದಾಹರಣೆಗಳಿವೆ. ಈ ವರ್ಷ ಮಳೆಯ ಪ್ರಮಾಣ ಹೆಚ್ಚು ಇದ್ದು, ವಿವಿಧ ಬೆಳೆ ರೋಗಗಳಿಂದ ಹಲವರ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ರೈತರು ಕೃಷಿಯ ಮೇಲಿನ ಆಸಕ್ತಿ ಕಳೆದುಕೊಳ್ಳುವ ಮಟ್ಟಕ್ಕೆ ಬಂದಿದ್ದಾರೆ.
ಮಳೆಯ ಪ್ರಮಾಣ ಅಳೆಯುವ ಇಲಾಖೆಯಿಂದ ಸರಿಯಾದ ವರದಿ ಸರಕಾರಕ್ಕೆ ತಲುಪದಿರುವುದು, ಅಧಿಕಾರಿಗಳ ನಿರ್ಲಕ್ಷ್ಯ – ಇವೇ ಪರಿಹಾರ ತಡವಾಗಲು ಕಾರಣವೆಂದು ಆರೋಪಿಸಲಾಯಿತು.
ಈ ಹಿನ್ನೆಲೆಯಲ್ಲಿ, ಸರಕಾರವು ಕೂಡಲೇ ಕಾರ್ಯಚರಣೆ ಕೈಗೊಂಡು ತಪ್ಪು ವರದಿ ನೀಡಿದ ಅಥವಾ ರೈತರ ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಕಿಶೋರ್ ಶಿರಾಡಿ ಆಗ್ರಹಿಸಿದರು.



ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸರಕಾರಕ್ಕೆ ಒತ್ತಡ ಹೇಡಿ ರೈತರಿಗೆ ಸರಿಯಾದ ವಿಮೆ ಪಾವತಿ ಮಾಡಲು ವ್ಯವಸ್ಥೆ ಮಾಡಬೇಕೆಂದೂ ಅವರು ಹೇಳಿದರು.
:ಜಯಪ್ರಕಾಶ್ ಕೂಜುಗೋಡು, ಅಶೋಕ್ ಕುಮಾರ ಮೂಲೆಮಜಲು, ಕಿಶೋರ್ ಕುಮಾರ್ ಕೂಜುಗೋಡು, ರಮಾನಂದ ಎಣ್ಣೆ ಮಜಲು, ಗಣೇಶ್ ಪಿಲಿಕಜ, ಉಮೇಶ್ ಹೊಸಳ್ಳಿಕೆ, ಶಿವರಾಮ ನಿಕ್ರಾಜೆ, ಸುಬ್ರಹ್ಮಣ್ಯ ಕೆ.ಎಲ್, ಶ್ರೀಧರ ಅಂಗಣ, ಮಾಧವ ಕೊಂಬಾರು, ಬಾಲಕೃಷ್ಣ ಕಟ್ಟಮನೆ, ಚಿದಾನಂದ ಕಟ್ರಮನೆ, ಪ್ರಸಾಂತ್ ಕೊಡಿಬೈಲು ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.


