ಶಿವಮೊಗ್ಗ: ಪತಿ ಹಾಗೂ ಆತನ ಮನೆಯವರವರಾದ ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ ಡೆತ್ ನೋಟ್ ಬರೆದಿಟ್ಟು ಮಹಿಳೆಯೊಬ್ಬಳು ನಾಲೆಗೆ ಹಾರಿರುವ ದಾರುಣ ಘಟನೆ ಶಿವಮೊಗ್ಗದಲ್ಲಿ ಬೆಳಕಿಗೆ ಬಂದಿದೆ. ಘಟನೆ ನಡೆದಿದ್ದು ಮೂರು ದಿನಗಳಾದರೂ ಮಹಿಳೆಯ ದೇಹ ಇನ್ನೂ ಪತ್ತೆಯಾಗಿಲ್ಲ.

ಈ ಘಟನೆ ತಿಳಿದ ಕೂಡಲೇ ಪತಿ ಹಾಗೂ ಆತ ಕುಟುಂಬಸ್ಥರು ಸ್ಥಳದಿಂದ ಪರಾರಿಯಾಗಿದ್ದಾರೆ. ಪತಿಯ ಮೊಬೈಲ್ ಕೂಡ ಈಗ ಸ್ವಿಚ್ಡ್‌ಆಫ್ ಆಗಿದ್ದು, ಪೊಲೀಸರಿಗೆ ಸಂಪರ್ಕ ಸಾಧ್ಯವಾಗಿಲ್ಲ. ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಭದ್ರಾವತಿ ತಾಲೂಕಿನ ಡಿ. ಬಿ. ಹಳ್ಳಿಯ ನಿವಾಸಿ ಲತಾ ಮತ್ತು ಶಿಕಾರಿಪುರ ತಾಲೂಕಿನ ದಿಂಡಿನಹಳ್ಳಿ ಮೂಲದ ಗುರುರಾಜ್ ಇವರ ವಿವಾಹ 2025ರ ಏಪ್ರಿಲ್ 14ರಂದು ನಡೆದಿತ್ತು. ಗುರುರಾಜ್ ಭದ್ರಾ ಡ್ಯಾಮ್ ಕೆಪಿಸಿಎಲ್‌ನಲ್ಲಿ ಎಇಇ ಆಗಿ ಕೆಲಸ ಮಾಡುತ್ತಿದ್ದರು. ಸರಕಾರಿ ನೌಕರನಾಗಿದ್ದ ಕಾರಣ, ಲತಾಳ ಪೋಷಕರು ಭರ್ಜರಿ ವರದಕ್ಷಿಣೆ ನೀಡಿ ಮಗಳ ವಿವಾಹ ನೆರವೇರಿಸಿದ್ದರು.

ಒಟ್ಟು 30 ಗ್ರಾಂ ಚಿನ್ನಾಭರಣ, 10 ಲಕ್ಷ ನಗದು ಸೇರಿ ಸುಮಾರು 60 ಲಕ್ಷ ರೂ. ಮದುವೆಗೆ ಖರ್ಚು ಮಾಡಲಾಗಿತ್ತು. ಆದರೆ ಮದುವೆಯೊಂದು ತಿಂಗಳಲ್ಲಿಯೇ ಪತಿ ಮತ್ತು ಮನೆಯವರ ನಿಜಸ್ವರೂಪ ಲತಾ ಮುಂದೆ ಬಯಲಾಗಿದೆ. ಹೆಚ್ಚುವರಿ ವರದಕ್ಷಿಣೆಗಾಗಿ ಗುರುರಾಜ್ ಮತ್ತು ಆತನ ಮನೆಯವರು ಪದೇ ಪದೇ ಕಿರುಕುಳ ನೀಡುತ್ತಿದ್ದರು.

ಲತಾ ಬರೆದಿರುವ ಡೆತ್ ನೋಟ್ ಪ್ರಕಾರ, ಪತಿ ತನ್ನ ಮುಂದೆ ಅಕ್ಕನ ಮಗಳೊಂದಿಗೆ ಅನಾಚಾರ ವರ್ತನೆ ತೋರಿದ್ದಾನೆ ಜೊತೆಗೆ ಇನ್ನೊಬ್ಬ ಯುವತಿಯೊಂದಿಗೆ ಚಾಟಿಂಗ್ ನಡೆಸುತ್ತಿದ್ದನೆಂಬ ವಿಚಾರಗಳು ಬೆಳಕಿಗೆ ಬಂದಿವೆ. ಆಷಾಢಕ್ಕಾಗಿ ತವರು ಮನೆಗೆ ಬಂದ ಲತಾಳನ್ನು, ಆಷಾಢ ಮುಗಿದರೂ ಕೂಡ ಪತಿ ಕರೆದುಕೊಂಡು ಹೋಗಲು ಬಂದಿರಲಿಲ್ಲ ಎನ್ನಲಾಗಿದೆ.

ತನ್ನ ಸಾವಿಗೆ ಪತಿಯ ಅಕ್ಕಂದಿರು ನಾಗರತ್ನ, ರಾಜೇಶ್ವರಿ, ಅತ್ತೆ ಶಾರದಮ್ಮ, ಅಕ್ಕನ ಗಂಡ ಕೃಷ್ಣಪ್ಪ ಹಾಗೂ ಪತಿ ಗುರುರಾಜ್ ನೇರ ಕಾರಣ ಎಂದು ಲತಾ ಡೆತ್ ನೋಟ್‌ನಲ್ಲಿ ಆರೋಪಿಸಿದ್ದಾರೆ.

ನವಂಬರ್ 23ರಂದು ಭದ್ರಾವತಿ ತಾಲೂಕಿನ ಹಂಚಿನ ಸಿದ್ಧಾಪುರ ಗ್ರಾಮದ ಬಳಿ ಇರುವ ಭದ್ರಾ ಬಲದಂಡೆ ನಾಲೆಗೆ ಲತಾ ಹಾರಿಹೋಗಿದ್ದಾರೆ. ಹಾರುವುದಕ್ಕೂ ಮುನ್ನ ದೇಗುಲದ ಬಳಿ ಬಳೆ ಹಾಗೂ ಮೊಬೈಲ್ ಇಟ್ಟು ಹೋಗಿರುವುದು ಪತ್ತೆಯಾಗಿದೆ.

ಮಗಳ ಕೃತ್ಯದಿಂದ ಪೋಷಕರು ತತ್ತರಿಸಿದ್ದು, ನಾಲೆ ತೀರಕ್ಕೆ ಸ್ಥಳೀಯರು ಹಾಗೂ ಕುಟುಂಬಸ್ಥರು ಆಗಮಿಸಿ ಹುಡುಕಾಟ ನಡೆಸಿದರು. ಆದರೆ ಇನ್ನೂ ದೇಹ ಪತ್ತೆಯಾಗದಿರುವುದರಿಂದ ಪ್ರದೇಶದಲ್ಲಿ ಆತಂಕ ಮತ್ತು ದುಃಖದ ವಾತಾವರಣ ನಿರ್ಮಾಣವಾಗಿದೆ.

Leave a Reply

Your email address will not be published. Required fields are marked *