ಶೃಂಗೇರಿ: ಶೃಂಗೇರಿ ತಾಲೂಕಿನಲ್ಲಿ ಹೃದಯಾಘಾತದಿಂದ 22 ವರ್ಷದ ವಿದ್ಯಾರ್ಥಿನಿ ಒಬ್ಬಳು ಮೃತಪಟ್ಟಿರುವ ದುರ್ಘಟನೆ ಸಂಭವಿಸಿದೆ. ಮೃತ ವಿದ್ಯಾರ್ಥಿನಿಯನ್ನು ದಿಶಾ (22) ಎಂದು ಗುರುತಿಸಲಾಗಿದೆ.

ದಿಶಾ ಅವರು ಶೃಂಗೇರಿಯ ಜೆಸಿಬಿಎಂ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಶೃಂಗೇರಿ ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು. ಇಂದು ಹಾಸ್ಟೆಲ್‌ನಲ್ಲಿದ್ದ ವೇಳೆ ಹಠಾತ್ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಸಹಪಾಠಿಗಳು ನೆರವಿಗೆ ಧಾವಿಸಿದರೂ, ಅದಾಗಲೇ ದಿಶಾ ಅವರು ಕೊನೆಯುಸಿರೆಳೆದಿದ್ದರು ಎನ್ನಲಾಗಿದೆ.

ಮೃತ ದಿಶಾ ಅವರು ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನವರಾಗಿದ್ದಾರೆ. ಅಕಾಲಿಕ ಸಾವಿನ ಸುದ್ದಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಕುಟುಂಬದವರಲ್ಲಿ ತೀವ್ರ ದುಃಖ ಮತ್ತು ಆಘಾತವನ್ನುಂಟು ಮಾಡಿದೆ.

ಘಟನೆಯ ಕುರಿತು ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *