ಬೆಳಾಲು: ನಾಪತ್ತೆಯಾಗಿದ್ದ ಬೆಳಾಲಿನ ಯುವಕನ ಶವ ಬೆಳಾಲು ಗ್ರಾಮದ ಬಲಿಪೆ ಪ್ರದೇಶದ ನೇತ್ರಾವತಿ ನದಿಯಲ್ಲಿ ಡಿಸೆಂಬರ್ 30ರಂದು ಪತ್ತೆಯಾದ ಘಟನೆ ನಡೆದಿದೆ.



ಮೃತರನ್ನು ಬೆಳಾಲು ಗ್ರಾಮದ ಪುರುಷರ ಬೆಟ್ಟು ನಿವಾಸಿ ರಾಜೇಶ್ ಪಿ. (30) ಎಂದು ಗುರುತಿಸಲಾಗಿದೆ. ಡಿಸೆಂಬರ್ 27ರಂದು ಬೆಳಗ್ಗೆ ಮನೆಯಿಂದ ಹೊರಗೆ ತೆರಳಿದ್ದ ರಾಜೇಶ್ ಪಿ. ಅವರು ಮನೆಗೆ ವಾಪಸ್ ಆಗದೇ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಕುಟುಂಬದವರು ಹಾಗೂ ಸ್ಥಳೀಯರು ಅವರಿಗಾಗಿ ತೀವ್ರ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.



ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಲಾಗಿದ್ದು, ನಂತರ ಪೊಲೀಸರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ಹುಡುಕಾಟ ಮುಂದುವರಿಸಿದ್ದರು. ಇದರ ನಡುವೆಯೇ ಸೋಮವಾರ ಬೆಳಿಗ್ಗೆ ರಾಜೇಶ್ ಪಿ. ಅವರ ಶವ ಬಲಿಪೆ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮೃತ ರಾಜೇಶ್ ಪಿ. ಅವರು ತಂದೆ ಜಿನ್ನಪ್ಪ ಗೌಡ, ತಾಯಿ ಚನ್ನಕ್ಕ, ಸಹೋದರ ಪ್ರಶಾಂತ್ ಹಾಗೂ ಸಹೋದರಿ ಗೀತಾ ಅವರನ್ನು ಅಗಲಿದ್ದಾರೆ.


ಘಟನೆಯ ಕುರಿತು ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಸಾವಿನ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

