ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದಲ್ಲಿ ಪುನರ್‌ನಿರ್ಮಾಣಗೊಂಡ ಐದು ಶಿಲಾಮಯ ಕಟ್ಟೆಗಳ ಸಮರ್ಪಣೆ ಕಾರ್ಯಕ್ರಮ ಏಪ್ರಿಲ್ 8ರಂದು ರಾತ್ರಿ ದೇವಳದ ಶಾರದಾ ಭಜನಾ ಮಂದಿರದ ಬಳಿಯ ಕಟ್ಟೆಯಲ್ಲಿ ಭಕ್ತಿಭಾವದಿಂದ ನೆರವೇರಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ದೇವಳದ ಸತ್ಯಧರ್ಮ ನಡೆಯಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ನಂತರ ಕಟ್ಟೆ ನಿರ್ಮಾಣದಲ್ಲಿ ಪಾಲ್ಗೊಂಡ ಕಾರ್ಕಳ ಕುಲದೇವತೆ ಶಿಲ್ಪಕಲಾ ಸಂಸ್ಥೆಯ ವೇಲುಸ್ವಾಮಿ ಅವರ ಪುತ್ರ ರವಿಚಂದ್ರ ವಿ. ಕಾರ್ಕಳ, ನೇರಳಕಟ್ಟೆ ಶ್ರೀಸಾಯಿ ಶಿಲ್ಪಕಲೆ ಸಂಸ್ಥೆಯ ಕೃಷ್ಣಪ್ರಸಾದ್ ಹಾಗೂ ವಾಸ್ತು ತಜ್ಞ ಪಿ.ಜಿ. ಜಗನ್ನಿವಾಸ ಅವರಿಗೆ ಪ್ರಸಾದ ವಿತರಿಸಲಾಯಿತು.

ಬಳಿಕ ಬ್ರಹ್ಮಶ್ರೀ ಗುರುತಂತ್ರಿ ಅವರಿಂದ ವಾಸ್ತು ಹೋಮಾದಿ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಈ ಸಂದರ್ಭದಲ್ಲಿ ನೈರುತ್ಯ ದಿಕ್ಕಿನ ಕಟ್ಟೆಯ ಸೇವಾಕರ್ತೆ ನಿವೃತ್ತ ಶಿಕ್ಷಕಿ ರೇವತಿ ಟೀಚರ್, ಆಗ್ನೇಯ ಭಾಗದ ಕಟ್ಟೆಯ ಸೇವಾಕರ್ತ ಕೇಶವ ಭಟ್ ಕೂವೆತೋಟ ದಂಪತಿ, ಕಂಡನಾಯಕನ ಕಟ್ಟೆಯ ಸೇವಾಕರ್ತರಾದ ಮಣಿಪಾಲ ಪರ್ಕಳದ ಸತೀಶ್, ಅಚ್ಯುತ, ನಾರಾಯಣ ಕುಟುಂಬಸ್ಥರು ಹಾಗೂ ಮರಾಟಿ ಸಮಾಜದ ಬಂಧುಗಳು ಭಾಗವಹಿಸಿದರು.

ಇದಲ್ಲದೆ, ಕಚೇರಿ ಬಳಿಯ ಕಟ್ಟೆಯ ಸೇವಾಕರ್ತರಾದ ಬೆಂಗಳೂರಿನ ಉದ್ಯಮಿ ಕೆ. ನಾಗೇಶ ರಾವ್ ಅತ್ತಾಳ ಕುಟುಂಬಸ್ಥರು, ಕೆರೆಯ ಬಳಿಯ ಕಟ್ಟೆಯ ಸೇವಾಕರ್ತರಾದ ಶಿವಾಜಿ ಛತ್ರಪತಿ ಗೋಲ್ಡ್ ಅಂಡ್ ಸಿಲ್ವರ್ ಅಸೋಸಿಯೇಶನ್ ಪದಾಧಿಕಾರಿಗಳು ಕೂಡ ಸಮರ್ಪಣಾ ಕಾರ್ಯದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ನಳಿನಿ ಪಿ. ಶೆಟ್ಟಿ, ಕೃಷ್ಣವೇಣಿ, ವಿನಯ ಸುವರ್ಣ, ಪ್ರಧಾನ ಅರ್ಚಕರಾದ ವೇ. ಮೂ. ವಸಂತ ಕೆದಿಲಾಯ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *