ಕಾಸರಗೋಡು: ಐತಿಹಾಸಿಕ ಮಹತ್ವ ಹೊಂದಿರುವ ಚಂದ್ರಗಿರಿ ಕೋಟೆ ಪರಿಸರದಲ್ಲಿರುವ ಚಂದ್ರಗಿರಿ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರ ದೇವಳದ 55ನೇ ಪ್ರತಿಷ್ಠಾ ಮಹೋತ್ಸವವು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿತು.



ಬ್ರಹ್ಮಶ್ರೀ ಅರವತ್ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ, ಕೀಕಾಂಗೋಡು ಪನ್ನಿಪಳ್ಳಿ ಬ್ರಹ್ಮಶ್ರೀ ಶ್ರೀಧರ ಕಾಯರ್ ತ್ತಾಯರ ನೇತೃತ್ವದಲ್ಲಿ ಹಾಗೂ ಚಂದ್ರಗಿರಿ ಅವಿನಾಶ್ ಭಟ್ ಅವರ ಸಹಭಾಗಿತ್ವದಲ್ಲಿ ಮಹೋತ್ಸವ ಜರುಗಿತು. ಏಪ್ರಿಲ್ 3ರಿಂದ 5ರವರೆಗೆ ನಡೆದ ಈ ವಾರ್ಷಿಕೋತ್ಸವದ ಅಂಗವಾಗಿ ಸಾಮೂಹಿಕ ಉಚಿತ ಬ್ರಹ್ಮೋಪದೇಶ, ಹರಿಸೇವೆ ಹಾಗೂ ಧರ್ಮದೈವಗಳ ಕೋಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದವು.


ಕುಲದೇವರಾದ ಕೊಪ್ಪಲು ಶ್ರೀ ಮಹಾಮ್ಮಾಯಿ ಅಮ್ಮನವರು, ಕೊಪ್ಪಲು ಕಾರ್ಯಕಾರ ವಿಷ್ಣುಮೂರ್ತಿ (ಗುಳಿಗ), ರಕ್ತೇಶ್ವರಿ, ಗುರು ಬ್ರಹ್ಮ, ಕುಲನಾಗ ಹಾಗೂ ಧೂಮಾವತಿ ಉಪದೇವತೆಗಳ ಆರಾಧನೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ನಡೆಯಿತು. ವಿಶೇಷವಾಗಿ “ಕೊಪ್ಪಲು ಕಾರ್ಯಕಾರ” ಎಂದೇ ಪ್ರಸಿದ್ಧಿಯಾದ ಗುಳಿಗನ ಕೋಲ ಭಕ್ತರಲ್ಲಿ ವಿಶೇಷ ಭಕ್ತಿ ಹುಟ್ಟಿಸಿದ್ದು, ಕೇರಳ, ಕರ್ನಾಟಕ ಹಾಗೂ ವಿದೇಶಗಳಿಂದ ಸಹಸ್ರಾರು ಭಕ್ತರು ಆಗಮಿಸಿದರು.
ಮಹೋತ್ಸವದ ಎರಡನೇ ದಿನ ನಡೆದ ಧಾರ್ಮಿಕ-ಸಾಂಸ್ಕೃತಿಕ ವಿದ್ವತ್ ಸಭೆಯನ್ನು ಉದ್ಘಾಟಿಸಿದ ಡಾ. ಬ್ರಿಜೇಶ್ ಕೆ. ಅವರು, “ಚಂದ್ರಗಿರಿ ಕೋಟೆ ಐತಿಹಾಸಿಕ, ಧಾರ್ಮಿಕ ಹಾಗೂ ಚಾರಿತ್ರಿಕ ಪ್ರವಾಸಿ ಕೇಂದ್ರವಾಗಿ ಮತ್ತಷ್ಟು ಅಭಿವೃದ್ಧಿಯಾಗಲಿದೆ” ಎಂದು ಹೇಳಿದರು.







ದೇವಳ ಸಮಿತಿ ಅಧ್ಯಕ್ಷ ಕೆ. ಲೋಕೇಶ್ ಕೊಪ್ಪಲು ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಸುರತ್ಕಲ್ ಪೊಲೀಸ್ ಇನ್ಸಪೆಕ್ಟರ್ ಪ್ರಮೋದ್ ಕುಮಾರ್ ಪಿ., ಅಬಕಾರಿ ಅಧೀಕ್ಷಕಿ ಶೋಭಾ ರಾಮಚಂದ್ರ, ಕೇರಳ ತೀಯಾ ಮಹಾಸಭಾ ರಾಜ್ಯಾಧ್ಯಕ್ಷ ಗಣೇಶ್ ಆರಮಂಗಾನ, ಶಿವರಾಮ ಕಾಸರಗೋಡು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬದಲ್ಲಿ 75 ವರ್ಷ ಪೂರೈಸಿದವರಿಗೆ ಸನ್ಮಾನ, ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ, ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಸಾಧಕರನ್ನು ಗೌರವಿಸಲಾಯಿತು.
ಮೂರು ದಿನಗಳ ಕಾಲ ಭಜನಾ, ದಾಸಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿವಿಧ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳು ಜರುಗಿದವು. ಚಲನಚಿತ್ರ ನಟ ರಂಜನ್ ಕಾಸರಗೋಡು ಸಹ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.


