ಪುತ್ತೂರು: ನಗರ ಭಾಗದ ಜನಸಾಮಾನ್ಯರ ಬದುಕಿನಲ್ಲಿ ಒಂದೊಮ್ಮೆ ಹಾಸುಹೊಕ್ಕಾಗಿದ್ದ ಪುತ್ತೂರಿನ ಐತಿಹಾಸಿಕ ಸೈರನ್ ಮತ್ತೆ ಮೊಳಗಲು ಆರಂಭಿಸಿದೆ. ಸುಮಾರು 20 ವರ್ಷಗಳಿಂದ ಮೌನವಾಗಿದ್ದ ಈ ಸೈರನ್‌ಗೆ ಸೋಮವಾರ ಮರುಜೀವ ನೀಡಲಾಗಿದ್ದು, ನಗರದಲ್ಲಿ ಹೊಸ ಚೈತನ್ಯ ಮೂಡಿಸಿದೆ.


1971ರಲ್ಲಿ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿದ್ದ ಈ ಸೈರನ್ ವ್ಯವಸ್ಥೆ, ಬೆಳಿಗ್ಗೆ–ಮಧ್ಯಾಹ್ನ–ಸಂಜೆ ಸಮಯದ ಸೂಚನೆ ನೀಡಿ ಜನರ ದಿನಚರಿಯ ಭಾಗವಾಗಿತ್ತು. ವಾಚ್ ಅಥವಾ ಮೊಬೈಲ್‌ಗಳ ಸೌಲಭ್ಯ ಕಡಿಮೆ ಇದ್ದ ಕಾಲದಲ್ಲಿ, ಜನರು ಸಮಯ ತಿಳಿಯಲು ಸೈರನ್‌ನ್ನೇ ಅವಲಂಬಿಸುತ್ತಿದ್ದರು. ಕಾಲಕ್ರಮೇಣ ನಿರ್ಲಕ್ಷ್ಯಕ್ಕೆ ಒಳಗಾದ ಈ ವ್ಯವಸ್ಥೆ ನಾದುರಸ್ಥಿಯಾಗಿ ಸುಮಾರು ಎರಡು ದಶಕಗಳ ಕಾಲ ನಿಶ್ಶಬ್ದವಾಗಿತ್ತು.





ಇದೀಗ ಪುತ್ತೂರು ಸಿಟಿ ಮುನ್ಸಿಪಾಲ ಕೌನ್ಸಿಲ್ ಸುಮಾರು ರೂ.5 ಲಕ್ಷ ವೆಚ್ಚದಲ್ಲಿ ಸೈರನ್‌ಗೆ ಪುನಶ್ಚೇತನ ನೀಡಿ ಮರುಪ್ರಾರಂಭ ಮಾಡಿದೆ. ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ 7 ಗಂಟೆಗೆ, ಮಧ್ಯಾಹ್ನ 1 ಗಂಟೆಗೆ ಹಾಗೂ ಸಂಜೆ 7 ಗಂಟೆಗೆ ತಲಾ 15 ಸೆಕೆಂಡ್‌ಗಳ ಕಾಲ ಸೈರನ್ ಮೊಳಗಲಿದೆ.
ಸೈರನ್‌ನ್ನು ಲೋಕಾರ್ಪಣೆಗೊಳಿಸಿದ ಅಶೋಕ್ ಕುಮಾರ್ ರೈ ಮಾತನಾಡಿ, “ಹಿಂದಿನ ಕಾಲದಲ್ಲಿ ಸೈರನ್ ಜನರ ಜೀವನದ ಅವಿಭಾಜ್ಯ ಅಂಗವಾಗಿತ್ತು. ಪುತ್ತೂರು ಬಹುಕಾಲದಿಂದ ಈ ವ್ಯವಸ್ಥೆಯಿಂದ ವಂಚಿತವಾಗಿತ್ತು. ಈಗ ಅದನ್ನು ಮತ್ತೆ ಜನತೆಗೆ ಪರಿಚಯಿಸುವ ಕೆಲಸ ಮಾಡಲಾಗಿದೆ. ಸಮಯ ನಿರ್ವಹಣೆಗೆ ಇದು ಉಪಯುಕ್ತವಾಗಲಿದೆ,” ಎಂದರು. ಸಾರ್ವಜನಿಕರು ಹಾಗೂ ಮಾಧ್ಯಮದವರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸೈರನ್ ಇತಿಹಾಸಕ್ಕೆ ಮರುಜೀವ ನೀಡಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ, ಪುತ್ತೂರಿನ ಕಿಲ್ಲೆ ಮೈದಾನದ ಸುತ್ತ ಹೊನಲು ಬೆಳಕಿನ ಲೈಟಿಂಗ್ ವ್ಯವಸ್ಥೆ ಮಾಡಲಾಗುವುದಾಗಿ ಶಾಸಕ ಅಶೋಕ್ ರೈ ಘೋಷಿಸಿದರು. ಸಂಜೆ ದುಡಿದು ರಾತ್ರಿ ವೇಳೆಯಲ್ಲೂ ಆಟವಾಡುವ ಯುವಕರಿಗೆ ಇದು ಹೆಚ್ಚಿನ ಅನುಕೂಲವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಸ್.ಬಿ. ಕೂಡಲಗಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತೆ ವಿದ್ಯಾ ಎಸ್. ಕಾಳೆ, ಮೆಸ್ಕಾಂ ಅಧಿಕಾರಿಗಳು ಹಾಗೂ ವಿವಿಧ ಗಣ್ಯರು ಉಪಸ್ಥಿತರಿದ್ದರು.




