ಕಡಬ, ಫೆ.21: ಸುಬ್ರಹ್ಮಣ್ಯ ಸಮೀಪದ ಐತೂರು ಗ್ರಾಮದಲ್ಲಿ ನಡೆದಿರುವ ಕಾಡೆಮ್ಮೆ (ಗೌರ್) ಅಕ್ರಮ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಲೋಪವಾಗಿದೆ ಎಂಬ ಆರೋಪದ ಹಿನ್ನೆಲೆ ರಾಜ್ಯ ಮುಖ್ಯ ವನ್ಯಜೀವಿ ಪಾಲಕರು (PCCF – Wildlife) ಸ್ಥಳೀಯ ಅರಣ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶ ಹೊರಡಿಸಿದ್ದಾರೆ.





ಐತೂರು ಗ್ರಾಮದ ಸಮೀಪ ಇತ್ತೀಚೆಗೆ ಕಾಡೆಮ್ಮೆಯನ್ನು ಅಕ್ರಮವಾಗಿ ಬೇಟೆಯಾಡಿರುವ ಘಟನೆ ಬೆಳಕಿಗೆ ಬಂದಿತ್ತು. ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಅರಣ್ಯಾಧಿಕಾರಿಗಳು ಗಂಭೀರವಾಗಿ ನಡೆಸಿಲ್ಲ, ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ನಿಯಮಗಳನ್ನು ಸಮರ್ಪಕವಾಗಿ ಪಾಲಿಸಿಲ್ಲ ಎಂಬ ಆರೋಪ ಕೇಳಿಬಂದಿತ್ತು.


ಈ ಕುರಿತು ಕಡಬ ನಿವಾಸಿ ತಿಮ್ಮಪ್ಪ ವಿ.ಕೆ. ಅವರು ಫೆಬ್ರವರಿ 6 ಮತ್ತು 7ರಂದು ಇಮೇಲ್ ಮೂಲಕ ರಾಜ್ಯ ಮುಖ್ಯ ವನ್ಯಜೀವಿ ಪಾಲಕರಿಗೆ ದೂರು ಸಲ್ಲಿಸಿದ್ದರು. ತಮ್ಮ ದೂರಿನಲ್ಲಿ, ಪ್ರಕರಣದ ಪ್ರಾಥಮಿಕ ತನಿಖೆಯಲ್ಲಿಯೇ ಹಲವಾರು ನಿಯಮ ಲಂಘನೆಗಳಾಗಿದ್ದು, ಸಾಕ್ಷ್ಯ ಸಂಗ್ರಹ ಹಾಗೂ ಕ್ರಮ ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ತೋರಲಾಗಿದೆ ಎಂದು ಅವರು ಆರೋಪಿಸಿದ್ದರು.
ದೂರುವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರಿನ ಅರಣ್ಯ ಭವನದಲ್ಲಿರುವ ಮುಖ್ಯ ವನ್ಯಜೀವಿ ಪಾಲಕರು, ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸಲು ಸೂಚಿಸಿದ್ದಾರೆ. ಅರ್ಜಿದಾರರು ಉಲ್ಲೇಖಿಸಿರುವ ಅಂಶಗಳನ್ನು ನಿಯಮಾನುಸಾರ ಪರಿಶೀಲಿಸಿ, ಸ್ಥಳೀಯ ಅರಣ್ಯಾಧಿಕಾರಿಗಳಿಂದ ಯಾವುದೇ ರೀತಿಯ ಲೋಪ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಅವರ ವಿರುದ್ಧ ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಇದೇ ವೇಳೆ, ಈ ಪ್ರಕರಣದಲ್ಲಿ ಕೈಗೊಳ್ಳುವ ಪ್ರತಿಯೊಂದು ಕ್ರಮದ ಬಗ್ಗೆ ಅರ್ಜಿದಾರರಿಗೆ ಪಾರದರ್ಶಕವಾಗಿ ಮಾಹಿತಿ ನೀಡಬೇಕು ಹಾಗೂ ಸಂಪೂರ್ಣ ತನಿಖಾ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಐತೂರು ಕಾಡೆಮ್ಮೆ ಬೇಟೆ ಪ್ರಕರಣ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದ್ದು, ತನಿಖೆಯ ಅಂತಿಮ ವರದಿ ಮೇಲೆ ಸ್ಥಳೀಯರು ಮತ್ತು ಪರಿಸರ ಹೋರಾಟಗಾರರ ಕಣ್ಣು ನೆಟ್ಟಿದೆ.

