ದಕ್ಷಿಣಕನ್ನಡ: ಪುತ್ತೂರಿನ ಬಹುಬಾಷಾ ಕಿರುತೆರೆ ನಟಿ ಅನುಷಾ ಹೆಗ್ಡೆ ಇಂದು ಕಿರುತೆರೆಯಲ್ಲಿ ಮಿಂಚುತ್ತಿರುವ ಅಸಾಧಾರಣ ಪ್ರತಿಭೆ. ಪುತ್ತೂರಿನ ಉರ್ಲಾಂಡಿ ನಿವಾಸಿ ಸ್ವರ್ಣಲತಾ ಮತ್ತು ಉಮೇಶ್ ಹೆಗ್ಡೆ ದಂಪತಿಗಳ ಪುತ್ರಿಯಾಗಿರುವ ಅನುಷಾ ಕಳೆದ ನಾಲ್ಕು ವರ್ಷದ ಹಿಂದೆ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ ಬಳಿಕ ತನ್ನ ನೆಚ್ಚಿನ ನಟನೆಯ ಅವಕಾಶವನ್ನು ಹುಡುಕಿಕೊಂಡು ರಾಜಧಾನಿ ಬೆಂಗಳೂರು ಕಡೆಗೆ ಪಯಣ ಬೆಳೆಸಿದ್ದ ಅನುಷಾ ತನ್ನ ಟ್ಯಾಲೆಂಟ್ ನಿಂದಾಗಿ ಮತ್ತೆ ಹಿಂದಿರುಗಿ ನೋಡಿಲ್ಲ. ಮುಟ್ಟಿದೆಲ್ಲವೂ ಚಿನ್ನ ಎನ್ನುವ ಮಾತಿನಂತೆ ಅಭಿನಯಿಸಿದ ಎಲ್ಲಾ ಧಾರಾವಾಹಿಗಳು ಫುಲ್ ಹಿಟ್ ಆಗಿ ಮಿಂಚುತ್ತಿರುವ ಈ ಯುವ ಪ್ರತಿಭೆ ಇಂದು ತಮಿಳು,ತೆಲುಗು,ಕನ್ನಡ ಕಿರುತೆರೆಯ ಬಹು ಬೇಡಿಕೆಯ ನಟಿ. ರಾಧಾರಮಣ,ಉದಯದಲ್ಲಿ ಅನುಪಲ್ಲವಿ,ಚೊಕ್ಕ ತಂಗಮ್ಮ ಹೀಗೆ ಹತ್ತಕ್ಕೂ ಮಿಕ್ಕಿದ ಪ್ರಾಜೆಕ್ಟ್ ಗಳಲ್ಲಿ ವರ್ಕ್ ಮಾಡಿರುವ ಅನುಷಾಳಿಗೆ ಇನ್ನಷ್ಟು ಆಫರ್ ಗಳು ಬರುತ್ತಿದ್ದರೂ, ತನ್ನ ಬ್ಯುಸಿ ಷೆಡ್ಯೂಲ್ ಕಾರಣಕ್ಕಾಗಿ ಹೊಸ ಪ್ರಾಜೆಕ್ಟ್ ಗಳನ್ನು ಸದ್ಯಕ್ಕೆ ಸಹಿ ಹಾಕದಿರಲು ನಿರ್ಧರಿಸಿದ್ದಾರೆ.


ತುಳುನಾಡಿನ ಅಪ್ಪಟ ಹುಡುಗಿಯಾಗಿರುವ ಅನುಷಾ ತುಳುನಾಡಿನ ಪ್ರಮುಖ ಆರಾಧನೆಯಾದ ದೈವಾರಾಧನೆಯಲ್ಲಿ ನಿರಂತರವಾಗಿ ಭಾಗಿಯಾಗುತ್ತಾರೆ. ಇತ್ತೀಚಿಗೆ ತಮ್ಮ ಪುತ್ತೂರಿನ ಮನೆಯಲ್ಲೇ ತುಳುನಾಡಿನ ಪ್ರಮುಖ ದೈವ ಎಂದು ಗುರುತಿಸಿಕೊಂಡಿರುವ ಕಲ್ಲುರ್ಟಿ ದೈವದ ನೇಮೋತ್ಸವದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ. ತನ್ನ ಕಲಾ ಜೀವನದಲ್ಲಿ ಇಷ್ಟೊಂದು ಸಾಧನೆ ತೋರಲು ಕಾರಣವಾದ ದೈವಗಳಿಗೆ ಕೋಲ ಸೇವೆ ಕೊಡಬೇಕು ಎನ್ನುವ ಆಸೆ ಇಟ್ಟುಕೊಂಡಿದ್ದ ಅನುಷಾ ಈ ಬಾರಿ ಕಲ್ಲುರ್ಟಿ ದೈವಕ್ಕೆ ಕೋಲ ಸೇವೆ ಕೊಡುವ ಮೂಲಕ ತನ್ನ ಹರಕೆಯನ್ನು ತೀರಿಸಿಕೊಂಡಿದ್ದಾರೆ. ತುಳುಚಿತ್ರರಂಗದಿಂದಲೂ ಸಾಕಷ್ಟು ಆಫರ್ ಗಳು ಬಂದಿದ್ದರೂ ಸಮಯಾವಕಾಶದ ಕೊರತೆಯಿಂದಾಗಿ ಆಕ್ಟ್ ಮಾಡಲು ಸಾಧ್ಯವಾಗಿಲ್ಲ ಎನ್ನುವ ಬೇಸರವೂ ಅನುಷಾರಲ್ಲಿದೆ.













