ಪುತ್ತೂರು: ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಬಹಿರಂಗ ಅಧಿವೇಶನವು ಏಪ್ರಿಲ್ 12ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ಪುರಭವನದಲ್ಲಿ ನಡೆಯಲಿದೆ ಎಂದು ಸಂಘದ ಉಪಾಧ್ಯಕ್ಷ ಹಾಗೂ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ತಿಳಿಸಿದ್ದಾರೆ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಮತ್ತು ರಾಜೇಶ್ ರೈ ಕಲ್ಲಂಗಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಡಾ. ಕೊಡ್ಮಾನ್ ನಾಗಪ್ಪ ಆಳ್ವ ಹಾಗೂ ಕಲ್ಯಾಣಿ ಆಳ್ವ ಅವರ ಸ್ಮರಣಾರ್ಥ ವಿವಿಧ ಕ್ಷೇತ್ರಗಳ 8 ಮಂದಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಇದಲ್ಲದೆ, ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಒಟ್ಟು 14 ಮಂದಿ ಸಾಧಕರನ್ನು ಸಮ್ಮಾನಿಸಲಾಗುತ್ತದೆ. ಕೊಡಿಯಾಲ್ ಗುತ್ತು ಭಾಸ್ಕರ ರೈ ಸ್ಮರಣಾರ್ಥ ಕಲೆ ಹಾಗೂ ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆಗೈದ ಪಿ. ಕಿಶನ್ ಹೆಗ್ಡೆ ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.
ಎ.14ರಂದು ಯಕ್ಷಗಾನ ಬಯಲಾಟ ಪುತ್ತೂರು ಜಾತ್ರೆಯ ಅಂಗವಾಗಿ ಏಪ್ರಿಲ್ 14ರಂದು ದೇವರು ಕೊಂಬೆಟ್ಟು ಕಟ್ಟೆಗೆ ಸವಾರಿ ಬರುವ ಪ್ರಯುಕ್ತ ಸಂಜೆ 5.30ಕ್ಕೆ ಕೊಂಬೆಟ್ಟು ಬಂಟರ ಭವನದ ಬಳಿ ಕಟೀಲು ಮೇಳದವರಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ಆಯೋಜಿಸಲಾಗಿದೆ. ತಾಲೂಕು ಬಂಟ ಸಮಾಜದ ಸದಸ್ಯರು ಸೇವಾರ್ಥಿಗಳಾಗಿ ಈ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ.
ಉಚಿತ ಪಿಯುಸಿ ಶಿಕ್ಷಣ ಯೋಜನೆ ಬೆಂಗಳೂರು ಬಂಟರ ಸಂಘದ ಸಂಕಲ್ಪ ಯೋಜನೆಯಡಿ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಉಚಿತ ವಸತಿ ಸಹಿತ ಪಿಯುಸಿ ಶಿಕ್ಷಣವನ್ನು ನೀಡಲಾಗುತ್ತಿದೆ. ಎಸೆಸೆಲ್ಸಿಯಲ್ಲಿ 70 ಶೇಕಡಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಪ್ರವೇಶ ಪರೀಕ್ಷೆಯ ಮೂಲಕ ಆಯ್ಕೆಯಾಗಲಿದ್ದಾರೆ.
ಅರ್ಹ ವಿದ್ಯಾರ್ಥಿಗಳು ಏಪ್ರಿಲ್ 10ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿಗಳನ್ನು ಪುತ್ತೂರು ಬಂಟರ ಸಂಘ ಅಥವಾ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ಪಡೆಯಬಹುದು. ಪ್ರವೇಶ ಪರೀಕ್ಷೆ ಏಪ್ರಿಲ್ 26ರಂದು ಪುತ್ತೂರಿನ ರಾಮಕೃಷ್ಣ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಂಬ್ರ ದುರ್ಗಾಪ್ರಸಾದ್ ರೈ, ಸಾಜ ರಾಧಾಕೃಷ್ಣ ಆಳ್ವ, ಶಿವನಾಥ ರೈ ಮೇಗಿನಗುತ್ತು, ನಿತ್ಯಾನಂದ ಶೆಟ್ಟಿ ಹಾಗೂ ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *