ಹಾಸನ್ : ಬುಲೆಟ್ ಬೈಕ್ ಚಲಾಯಿಸುವಾಗ ರಸ್ತೆ ಹಂಪ್ಸ್ ಕಾಣದೆ ನಿಯಂತ್ರಣ ತಪ್ಪಿ ಇಬ್ಬರು ಯುವತಿಯರು ರಸ್ತೆಗೆ ಬಿದ್ದ ಪರಿಣಾಮ ಓರ್ವ ಯುವತಿ ಮೃತಪಟ್ಟಿರುವ ದುರ್ಘಟನೆ ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ.

ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿಯಾಗಿದ್ದಾರೆ. ಮತ್ತೋರ್ವ ಯುವತಿ ಸ್ವಾತಿ (24) ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತ ಪ್ರಿಯಾ ಖಾಸಗಿ ಕಾಲೇಜಿನಲ್ಲಿ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಸ್ವಾತಿಗೆ ಕಳೆದ ನವೆಂಬರ್‌ನಲ್ಲಿ ಮದುವೆಯಾಗಿದ್ದು, ಇಬ್ಬರೂ ಸ್ನೇಹಿತರಾಗಿ ಬುಲೆಟ್ ಬೈಕ್‌ನಲ್ಲಿ ಜಾಲಿ ರೈಡ್‌ಗೆ ತೆರಳಿದ್ದರು ಎನ್ನಲಾಗಿದೆ.

ಬೈಕ್ ಚಲಾಯಿಸುವ ವೇಳೆ ರಸ್ತೆ ಹಂಪ್ಸ್ ಗಮನಕ್ಕೆ ಬಾರದ ಕಾರಣ ನಿಯಂತ್ರಣ ತಪ್ಪಿ ಇಬ್ಬರೂ ರಸ್ತೆಗೆ ಬಿದ್ದಿದ್ದಾರೆ. ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾಸನ್ ರೂರಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *