ಸುಬ್ರಹ್ಮಣ್ಯ (ದ.ಕ): ಮಾರ್ಚ್ 3ರಂದು ಸಂಭವಿಸಲಿರುವ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ದರ್ಶನ ಹಾಗೂ ಸೇವೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ.






ಗ್ರಹಣವೆಂದರೆ ಭೂಮಿ ಸೂರ್ಯನ ಬೆಳಕನ್ನು ತಡೆಯುವಾಗ ಚಂದ್ರನ ಮೇಲೆ ನೆರಳು ಬೀಳುವ ಖಗೋಳ ಘಟನೆ. ಈ ಸಂದರ್ಭವನ್ನು ಕೇಟ್ಟು ಸಮಯವೆಂದು ಪರಿಗಣಿಸಲಾಗುತ್ತಿದ್ದು, ದೇವಸ್ಥಾನಗಳಲ್ಲಿ ವಿಶೇಷ ನಿಯಮಗಳನ್ನು ಅನುಸರಿಸಲಾಗುತ್ತದೆ.
ಚಂದ್ರಗ್ರಹಣ ಹಿನ್ನೆಲೆ, ದೇವಸ್ಥಾನದಲ್ಲಿ ಭಕ್ತರಿಗೆ ದರ್ಶನ ಹಾಗೂ ಸೇವೆಗಳ ಸಮಯದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಭಕ್ತರು ದೇವಸ್ಥಾನಕ್ಕೆ ಆಗಮಿಸುವ ಮುನ್ನ ಬದಲಾದ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಹಕರಿಸುವಂತೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮನವಿ ಮಾಡಿದೆ.

ಅಧಿಕೃತ ಪ್ರಕಟಣೆಯಂತೆ, ದಿನಾಂಕ 2-03-2026 ಹಾಗೂ 3-03-2026ರಂದು ದೇವಸ್ಥಾನದಲ್ಲಿ ಸರ್ಪಸಂಸ್ಕಾರ ಪೂಜೆಗಳನ್ನು ನಡೆಸಲಾಗುವುದಿಲ್ಲ. ಚಂದ್ರಗ್ರಹಣದ ಕಾರಣದಿಂದ 3-03-2026ರಂದು ಯಾವದೇ ಸೇವೆಗಳು ಇರುವುದಿಲ್ಲ ಎಂದು ತಿಳಿಸಲಾಗಿದೆ.
ಮಾರ್ಚ್ 3ರಂದು ದೇವಸ್ಥಾನದ ಮಹಾಪೂಜೆಯನ್ನು ಬೆಳಗ್ಗೆ 8 ಗಂಟೆಗೆ ನಡೆಸಲಾಗುವುದು. ಬಳಿಕ ಬೆಳಗ್ಗೆ 9 ಗಂಟೆಗೆ ದೇವಸ್ಥಾನದ ಬಾಗಿಲುಗಳನ್ನು ಮುಚ್ಚಲಾಗುತ್ತದೆ. ರಾತ್ರಿ 7 ಗಂಟೆಯ ನಂತರ ದೇವಸ್ಥಾನದಲ್ಲಿ ಪೂಜೆ ನಡೆಯಲಿದೆ. ಗ್ರಹಣ ಮುಗಿದ ನಂತರ ರಾತ್ರಿ 9 ಗಂಟೆಗೆ ದೇವಸ್ಥಾನವು ಮತ್ತೆ ಭಕ್ತರ ದರ್ಶನಕ್ಕೆ ತೆರೆಯಲಾಗುತ್ತದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.



