ಸುಬ್ರಹ್ಮಣ್ಯ: ಸಮೀಪದ ಏನೆಕಲ್ಲು ಗ್ರಾಮದ ಪರಂಪಾಡಿ ಪ್ರದೇಶದಲ್ಲಿ ಚಿರತೆ ಕಾಟ ಮತ್ತೊಮ್ಮೆ ಹೆಚ್ಚಳ ಕಂಡಿದ್ದು, ಮನೆ ಅಂಗಳದಲ್ಲಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ಏಪ್ರಿಲ್ 8ರ ತಡರಾತ್ರಿ ನಡೆದಿದೆ.







ಅರಂಪಾಡಿ ನಿವಾಸಿ ಈಶ್ವರಗೌಡ ಅವರ ಮನೆಯ ಅಂಗಳದಲ್ಲಿ ಮಲಗಿದ್ದ ನಾಯಿಯನ್ನು ಚಿರತೆ ದಾಳಿ ಮಾಡಿ ಕೊಂಡೊಯ್ದಿದ್ದು, ಈ ಸಂಪೂರ್ಣ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಕೆಲವು ದಿನಗಳ ಹಿಂದೆಯೇ ಕಿಶೋರ್ ಪರಂಪಾಡಿ ಅವರ ಮನೆಯ ನಾಯಿಯನ್ನೂ ಚಿರತೆ ಬಲಿ ತೆಗೆದುಕೊಂಡಿತ್ತು. ಇದರಿಂದಾಗಿ ಅರಂಪಾಡಿ ವ್ಯಾಪ್ತಿಯಲ್ಲಿ ಚಿರತೆ ಸಂಚಾರ ಹೆಚ್ಚಾಗಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಪ್ರದೇಶದಲ್ಲಿ ದಟ್ಟ ಕಾಡು ಇರುವುದರಿಂದ ರಾತ್ರಿ ವೇಳೆಯಲ್ಲಿ ರಸ್ತೆಗಳಲ್ಲಿ ಸಂಚಾರಕ್ಕೂ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಬದಿಯಲ್ಲಿ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಅಳವಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇದಲ್ಲದೆ, ಚಿರತೆಯನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ವರ್ಗಾವಣೆ ಮಾಡಲು ಅರಣ್ಯ ಇಲಾಖೆ ಮತ್ತು ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.
ಈ ಘಟನೆ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಭಯ ಮತ್ತು ಆತಂಕ ಹೆಚ್ಚಾಗಿದ್ದು, ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬರುತ್ತಿದೆ.


