ಕಡಬ : ಪಟ್ಟಣದ ಹಸಿ ಮೀನು ಮಾರುಕಟ್ಟೆಯಲ್ಲಿ ತಾಜಾ ಮೀನುಗಳು ಲಭ್ಯವಾಗುತ್ತಿಲ್ಲ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕಡಬ ಪಟ್ಟಣ ಪಂಚಾಯಿತಿ ಕ್ರಮ ಕೈಗೊಂಡಿದ್ದು, ಇಬ್ಬರು ವ್ಯಾಪಾರಿಗಳಿಗೆ ಕಟ್ಟುನಿಟ್ಟಿನ ನೋಟಿಸ್ ಜಾರಿಗೊಳಿಸಿದೆ. ಪಂಚಾಯಿತಿ ಕ್ರಮದ ವಿರುದ್ಧ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾರುಕಟ್ಟೆಯ ಸ್ಟಾಲ್ ಸಂಖ್ಯೆ 2ರ ಮಾಲೀಕ ಆದಂ ಸಾಹೇಬ್ ಹಾಗೂ ಸ್ಟಾಲ್ ಸಂಖ್ಯೆ 3ರ ಮಾಲೀಕ ಕೆ.ಎಂ. ಮ್ಯಾಥ್ಯೂ ವಿರುದ್ಧ ಸಾರ್ವಜನಿಕರಿಂದ ಅನೇಕ ದೂರುಗಳು ಕೇಳಿಬಂದಿದ್ದವು. ತಾಜಾ ಮೀನುಗಳನ್ನು ಮಾರಾಟ ಮಾಡದೇ, ಮೀನುಗಳನ್ನು ಐಸಿನಲ್ಲಿ ಹಾಕಿ ಎರಡು-ಮೂರು ದಿನಗಳ ಕಾಲ ದಾಸ್ತಾನು ಇಟ್ಟು ನಂತರ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದೇ ವೇಳೆ ದರಪಟ್ಟಿಯಲ್ಲಿ ದೊಡ್ಡ ಮಟ್ಟದ ವ್ಯತ್ಯಾಸ ಮಾಡುತ್ತಾ ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬುದಾಗಿ ಸಾರ್ವಜನಿಕರು ಪಟ್ಟಣ ಪಂಚಾಯಿತಿಗೆ ದೂರು ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಸಂಬಂಧಿಸಿದ ಇಬ್ಬರು ವ್ಯಾಪಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ತಕ್ಷಣ ಆಹಾರ ಇಲಾಖೆಯಿಂದ ಅಧಿಕೃತ ಪ್ರಮಾಣಪತ್ರ ಪಡೆಯಬೇಕು, ಪ್ರತಿದಿನದ ಮೀನು ದರವನ್ನು ಸ್ಪಷ್ಟವಾಗಿ ಬೋರ್ಡಿನಲ್ಲಿ ಪ್ರದರ್ಶಿಸಬೇಕು ಹಾಗೂ 7 ದಿನಗಳೊಳಗೆ ಪಾಲನ ವರದಿ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.
ನಿರ್ದೇಶನಗಳನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಂಚಾಯಿತಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *