ಚಾಮರಾಜನಗರ : ನಾಗರಹೊಳೆ ಮತ್ತು ಬಂಡೀಪುರ ಸಫಾರಿ ಹಾಗೂ ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಚಾರಣವನ್ನು ಇಂದಿನಿಂದಲೇ ಬಂದ್ ಮಾಡಿ ಹುಲಿ ಸೆರೆ ಕಾರ್ಯಾಚರಣೆಗೆ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ನಾಗರಹೊಳೆ ಮತ್ತು ಬಂಡೀಪುರ ಅರಣ್ಯ ಪ್ರದೇಶಗಳಲ್ಲಿ ಇತ್ತೀಚೆಗೆ ಸಂಭವಿಸಿದ ಹುಲಿ ದಾಳಿಯಿಂದ ಜೀವಹಾನಿ ಸಂಭವಿಸಿರುವ ಹಿನ್ನೆಲೆ, ಮುಂದಿನ ಆದೇಶದವರೆಗೆ ಎರಡೂ ಪ್ರದೇಶಗಳ ಸಫಾರಿ ಹಾಗೂ ಟ್ರೆಕ್ಕಿಂಗ್ (ಚಾರಣ) ಚಟುವಟಿಕೆಗಳನ್ನು ಇಂದಿನಿಂದಲೇ ಬಂದ್ ಮಾಡುವಂತೆ ಹಾಗೂ ಸಫಾರಿ ಸಿಬ್ಬಂದಿಯನ್ನು ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಬಂಡೀಪುರ, ನಾಗರಹೊಳೆ ಅರಣ್ಯದಂಚಿನಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಹುಲಿ ದಾಳಿಯಿಂದ ಮೂರು ಅಮೂಲ್ಯ ಜೀವ ಹಾನಿ ಆಗಿರುವುದು ಅತೀವ ನೋವು ತಂದಿದೆ.

ಬಳಿಕ ಹುಲಿ ದಾಳಿಯ ನಂತರ ದಿನಾಂಕ 27.10.2025ರಂದು ಬಂಡೀಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಹುಲಿ ಸೆರೆಗೆ ತುರ್ತು ಕ್ರಮ ಕೈಗೊಳ್ಳಲು ಮತ್ತು ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸುವಂತೆ ಸೂಚಿಸಿರುತ್ತೇನೆ. ಇದಾದ ದಿನಾಂಕ 02.11.2025ರಂದು ಚಾಮರಾಜನಗರದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೆ. ವೆಂಕಟೇಶ್ ಮತ್ತು ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಶಾಸಕರು, ಅಧಿಕಾರಿಗಳ ಸಮ್ಮುಖದಲ್ಲಿ ರೈತರು, ಸಾರ್ವಜನಿಕರೊಂದಿಗೆ ಸಂವಾದ ನಡೆಸಿ, ಹುಲಿ ಸೆರೆಗೆ ಎಲ್ಲ ಸಾಧ್ಯ ಕ್ರಮ ಕೈಗೊಳ್ಳುವಂತೆ ಸೂಚಿಸುವುದರ ಜೊತೆಗೆ ಸಫಾರಿ ಬಂದ್ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿರುತ್ತದೆ. ಇದಾದ ಬಳಿಕವೂ ಇಂದು ಮತ್ತೊಂದು ದಾರುಣ ಘಟನೆ ಸಂಭವಿಸಿರುವುದು ಆಘಾತ ತಂದಿದೆ.

ಚಾಮರಾಜನಗರದಲ್ಲಿ ನಡೆದ ಸಭೆಯಲ್ಲಿ ರೈತರು ಕಾಡಿನಲ್ಲಿ ನಡೆಯುವ ಸಫಾರಿಯ ಕಿರಿಕಿರಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರ ಬರುತ್ತಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಅಧಿಕಾರಿಗಳು ಸಿಬ್ಬಂದಿಯ ಕೊರತೆ ಇದೆ ಎಂದು ತಿಳಿಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಇಂದಿನಿಂದಲೇ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಬಂದ್ ಮಾಡಲು ಮತ್ತು ಮಾನವ-ವನ್ಯಜೀವಿ ಸಂಘರ್ಷ ಇರುವ ಪ್ರದೇಶದಲ್ಲಿ ಟ್ರಕ್ಕಿಂಗ್ (ಚಾರಣ) ಸ್ಥಗಿತಗೊಳಿಸಲು ಹಾಗೂ ಬಂಡೀಪುರ, ನಾಗರಹೊಳೆ ಸಫಾರಿಯ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಎಲ್ಲ ಅಧಿಕಾರಿಗಳು ಮತ್ತು ವಾಹನ ಚಾಲಕರ ಸಹಿತ ಎಲ್ಲ ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆಗೆ ನಿಯೋಜನೆ ಮಾಡಲು ಹಾಗೂ ವನ್ಯಜೀವಿ ವಿಭಾಗದ ಎಪಿಸಿಸಿಎಫ್ ಮತ್ತು ಹುಲಿ ಯೋಜನೆಯ ನಿರ್ದೇಶಕರು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪದೆ ಪದೇ ದಾಳಿ ಮಾಡುತ್ತಿರುವ ಹುಲಿಯನ್ನು ಹಿಡಿಯಲು ಕ್ರಮ ಕೈಗೊಳ್ಳುವಂತೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *