ಕಡಬ: ಪಟ್ಟಣದ ಶಾಲೆಯ ಸಮೀಪ ದಶಕಗಳಿಂದ ಗೂಡಂಗಡಿ ನಡೆಸುತ್ತಿದ್ದ ಹಿರಿಯರಾದ ಗೋಪಾಲಗೌಡ ಸಂಕೇಶ ಅವರು ಗುರುವಾರ ರಾತ್ರಿ ನಿಧನರಾದರು. ಅವರಿಗೆ ಸುಮಾರು 70 ವರ್ಷ ವಯಸ್ಸಾಗಿತ್ತು.





ಕಳೆದ ಕೆಲವು ಸಮಯಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ವಿಧಿವಶರಾದರು.
ಸರಸ್ವತಿ ಶಾಲೆಯ ಬಳಿ ತಮ್ಮ ಅಂಗಡಿ ನಡೆಸುತ್ತಿದ್ದ ಇವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಚಿರಪರಿಚಿತರಾಗಿದ್ದರು. ಸರಳ ಸ್ವಭಾವ ಮತ್ತು ಮೃದು ಮಾತಿನ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಇದರ ಜೊತೆಗೆ ಕಡಬ–ಉಪ್ಪಿನಂಗಡಿ ಟ್ಯಾಕ್ಸಿ ಹಾಗೂ ಟೆಂಪೋ ಸೇವೆಯಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು ಪ್ರಯಾಣಿಕರೊಂದಿಗೆ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು.
ಇವರ ನಿಧನಕ್ಕೆ ಸ್ಥಳೀಯ ವ್ಯಾಪಾರಿಗಳು ಹಾಗೂ ಊರಿನ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮೃತರು ಪತ್ನಿ, ಪುತ್ರ ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.



