ಪುತ್ತೂರು: ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ರಚಿಸಲಾದ ಬಡಾವಣೆಗಳಲ್ಲಿನ ಬಿ-ಖಾತಾ ಹೊಂದಿರುವ ನಿವೇಶನಗಳಿಗೆ ಎ-ಖಾತಾ ನೀಡಲು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ, ನಿವೇಶನದ ಸಂಪರ್ಕ ರಸ್ತೆಯನ್ನು ನಗರಸಭೆಯು ಸಾರ್ವಜನಿಕ ರಸ್ತೆ ಎಂದು ಘೋಷಿಸಿ ಅದರ ದಾಖಲೆಗಳನ್ನು ಸಿದ್ಧಪಡಿಸಿದ ಬಳಿಕ ಪುತ್ತೂರು ನಗರಾಭಿವೃದ್ಧಿ ಪ್ರಾಧಿಕಾರ (ಪುಡಾ)ಕ್ಕೆ ಏಕ ನಿವೇಶನ ವಿನ್ಯಾಸಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಮತ್ತು ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಧಿಕೃತವಾಗಿ ವಿಭಾಗಗೊಳಿಸಿದ ನಿವೇಶನಗಳ (ಕಟ್ ಕನ್ವರ್ಷನ್) ಸಮಸ್ಯೆಯಿಂದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಇದನ್ನು ಪರಿಹರಿಸಲು ಬಹುಕಾಲದಿಂದ ಬೇಡಿಕೆ ಇತ್ತು. ಪುತ್ತೂರಿನಲ್ಲಿ ಈ ಸಮಸ್ಯೆ ಗಂಭೀರವಾಗಿದ್ದ ಹಿನ್ನೆಲೆ, ಸ್ಥಳೀಯ ಶಾಸಕರು ಸರ್ಕಾರ, ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ವಿಶೇಷ ಪ್ರಯತ್ನ ನಡೆಸಿದರು. ಪುಡಾದಿಂದಲೂ ನಿರಂತರ ಒತ್ತಡ ಹೇರಲಾಗಿದ್ದು, ಸರ್ಕಾರದ ಆದೇಶ ಹೊರಬರುವಂತೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಸರಕಾರದ ಆದೇಶದ ವಿವರಗಳನ್ನು ನೀಡಿದ ಗುರುಪ್ರಸಾದ್ ಅವರು, ಬಿ-ಖಾತಾದಿಂದ ಎ-ಖಾತಾಗೆ ಪರಿವರ್ತನೆಗೆ ಸಂಬಂಧಿಸಿ ಆರು ವಿಭಾಗಗಳನ್ನು ಗುರುತಿಸಲಾಗಿದೆ ಎಂದು ಹೇಳಿದರು. ನಗರ ಸ್ಥಳೀಯ ಸಂಸ್ಥೆಗಳಿಂದ ಈಗಾಗಲೇ ಬಿ-ಖಾತಾ ಪಡೆದ ಖಾಲಿ ನಿವೇಶನಗಳು ಹಾಗೂ ಪರವಾನಿಗೆ ಇಲ್ಲದೆ ನಿರ್ಮಿಸಿದ ಕಟ್ಟಡಗಳಿಗೂ ಈ ಆದೇಶ ಅನ್ವಯವಾಗಲಿದೆ.
ಇದಲ್ಲದೆ, ರಾಜ್ಯ ನಗರ-ಗ್ರಾಮಾಂತರ ಯೋಜನಾ ಕಾಯ್ದೆ-1961 ಉಲ್ಲಂಘಿಸಿ ನಿರ್ಮಿಸಲಾದ ಅಪಾರ್ಟ್‌ಮೆಂಟ್‌ಗಳು, ಭೂ ಪರಿವರ್ತನೆ ಆಗದೆ ಕಂದಾಯ ಸರ್ವೆ ಸಂಖ್ಯೆಯಲ್ಲಿರುವ ಖಾಲಿ ಜಮೀನುಗಳು, ಹಾಗೂ ಅನುಮೋದನೆ ಪಡೆಯದೇ ಉಪವಿಭಾಗ ಮಾಡಲಾದ ಭೂಮಿಗೂ ಖಾತಾ ನೀಡುವ ಪ್ರಕ್ರಿಯೆ ನಡೆಯಲಿದೆ.
2024ರ ಸೆಪ್ಟೆಂಬರ್ 10ರೊಳಗೆ ನೋಂದಾಯಿತ ದಾಖಲೆಗಳ ಮೂಲಕ ಮಾರಾಟಗೊಂಡ, ಭೂ ಪರಿವರ್ತನೆ ಆಗದೇ ಅಥವಾ ಅನುಮೋದನೆ ಪಡೆಯದೇ ಉಪವಿಭಾಗ ಮಾಡಲಾದ ಭೂಮಿಗಳಿಗೆ ಸಹ ಈ ಆದೇಶ ಅನ್ವಯವಾಗಲಿದೆ ಎಂದು ಅವರು ವಿವರಿಸಿದರು.
ಇನ್ನೂ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95ಕ್ಕೆ ತಿದ್ದುಪಡಿ ತರಲಾಗಿದ್ದು, ಮಹಾಯೋಜನೆ ವ್ಯಾಪ್ತಿಯಲ್ಲಿರುವ ಜಮೀನುಗಳಿಗೆ ಕೃಷಿಯಿಂದ ಕೃಷಿಯೇತರ ಉದ್ದೇಶಗಳಿಗೆ ಭೂ ಪರಿವರ್ತನೆಗೆ ಜಿಲ್ಲಾಧಿಕಾರಿಗಳ ಅನುಮತಿ ಅಗತ್ಯವಿಲ್ಲ. ಇದಕ್ಕಾಗಿ ಸಂಬಂಧಿತ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿ, ಸಭೆಯಲ್ಲಿ ಅನುಮೋದನೆ ಪಡೆದು, ನಿಗದಿತ ಶುಲ್ಕ ಪಾವತಿಸಬೇಕು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ ಹಾಗೂ ನಿಹಾಲ್ ಪಿ. ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *